ಜಿ.ಟಿ.ದೇವೇಗೌಡರಿಗೆ ಕೀಳರಿಮೆ ಬೇಡ, ಮುಕ್ತ ವಿವಿಯಿಂದ ಪದವಿ ಪಡೆಯಲಿ: ಮಾಜಿ ಸಚಿವ ರಾಯರೆಡ್ಡಿ

Update: 2018-08-14 16:09 GMT

ಬೆಂಗಳೂರು, ಆ.14: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಹೆಚ್ಚಿನ ಶಿಕ್ಷಣ ಪಡೆದಿಲ್ಲ ಎಂಬ ಕೀಳರಿಮೆಯಿಂದ ಬಳಲುವುದು ಬೇಡ. ಅಗತ್ಯವಿದ್ದಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪರೀಕ್ಷೆ ಬರೆದು ಒಂದು ಪದವಿ ಪಡೆದುಕೊಳ್ಳಲಿ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಸಲಹೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆಯದೆ ಇರುವುದು ಅಪರಾಧವಲ್ಲ. ಸುಶಿಕ್ಷಿತರಲ್ಲೂ ಎಷ್ಟೋ ಜನ ಕ್ರಿಮಿನಲ್ ಗಳಿದ್ದಾರೆ. ಸಚಿವರಿಗೆ ಬರುವ ಅಲ್ಪಸ್ವಲ್ಪ ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕಿಂತ ಸಮೃದ್ಧ ಭಾಷೆಯಾಗಿರುವ ಕನ್ನಡದಲ್ಲೆ ಮಾತನಾಡುವುದು ಉತ್ತಮ ಎಂದರು.

ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ನಮ್ಮ ಸರಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ಸದಸ್ಯರನ್ನು ಬದಲಾವಣೆ ಮಾಡುವ ಕೆಲಸವನ್ನು ಜಿ.ಟಿ.ದೇವೇಗೌಡರು ಮಾಡಬಾರದಿತ್ತು. ಈ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವುದಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಸರಕಾರದ ಅವಧಿಯಲ್ಲಿ ಅರ್ಹರನ್ನೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದರೂ, ಅನರ್ಹರನ್ನು ನೇಮಕ ಮಾಡಲಾಗಿದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಈ ಪ್ರಕರಣವು ಒಂದು ರೀತಿಯಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ ಎಂದು ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ. ಈಗಾಗಲೆ 12 ಚುನಾವಣೆಗಳನ್ನು ಎದುರಿಸಿದ್ದೇನೆ. 7 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ಸಂಸದನಾಗಿ ಕೆಲಸ ಮಾಡಿ ಸಾಕಾಗಿ ಹೋಗಿದೆ. ಮುಂದಿನ ವಿಧಾನಸಭಾ ಚುನಾವಣೆವರೆಗೆ ಕಾಯುತ್ತೇನೆ ಎಂದು ರಾಯರಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News