×
Ad

ಹುಣಸೂರು ಜೋಡಿ ಕೊಲೆ ಪ್ರಕರಣ: ಅವ್ವಾ ಮಾದೇಶ ಸೇರಿ 8 ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

Update: 2018-08-14 21:56 IST

ಬೆಂಗಳೂರು, ಆ.14: ಜೋಡಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೈಸೂರಿನ ಮಾಜಿ ಕಾರ್ಪೊರೇಟರ್ ಅವ್ವಾ ಮಾದೇಶ ಸೇರಿದಂತೆ ಎಂಟು ಜನ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

ಈ ಕುರಿತಂತೆ ಅವ್ವ ಮಾದೇಶ, ಆತನ ಸಹೋದರ ಮಂಜು ಹಾಗೂ ಆರು ಜನ ಸಹಚರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮಾನ್ಯ ಮಾಡಿದೆ.

ಖುಲಾಸೆಗೊಂಡವರು: ಅವ್ವಾ ಮಾದೇಶ, ಆತನ ಸಹೋದರ ಮಂಜು, ಸಹಚರರಾದ ಸತೀಶ, ಚಂದು, ರವಿ, ಶಿವಕುಮಾರ್, ರಮೇಶ್ ಮತ್ತು ಕಾರ್ತೀಕ ಖುಲಾಸೆಗೊಂಡವರು.  

ರಾಜೇಶ್‌ಗಾಂಧಿ ಹಾಗೂ ರಾಮು ಎಂಬುವರನ್ನು ಅವ್ವ ಮಾದೇಶ ಹಾಗೂ ಸಹಚರರು 2008ರ ಮೇ 14ರಂದು ಹುಣಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಿಂದಿನ ಮುದ್ದಪ್ಪ ಫಾರ್ಮ್ ಹೌಸ್‌ನಲ್ಲಿ ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು.

ಪ್ರಕರಣದಲ್ಲಿ ಮೈಸೂರಿನ ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾಕ್ಷಧಾರಗಳ ಕೊರತೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಪೀಠ ಪ್ರಕಟಿಸಿದೆ.

ಅವ್ವಾ ಮಾದೇಶ ಹಾಗೂ ಮಂಜು ಪರ ಹಷ್ಮತ್ ಪಾಷಾ, ಸಹಚರರ ಪರ ಹಿರಿಯ ವಕೀಲ ರವಿ ಬಿ.ನಾಯ್ಕ ಹಾಗೂ ಪರಮೇಶ್ವರ ವಾದ ಮಂಡಿಸಿದರು.

ಪ್ರಕರಣವೇನು: ರಾಜೇಶ್ ಮತ್ತು ರಾಮು 2008ರ ಮೇ 14ರಂದು ಹುಣಸೂರು ಪಟ್ಟಣದ ಕೋಕೋನಟ್ ಗಾರ್ಡನ್ ಹಿಂಭಾಗದ ಚರ್ಚ್ ಬಳಿ ಕೊಲೆಗೀಡಾಗಿದ್ದರು. ರಿಯಲ್ ಎಸ್ಟೇಟ್ ವಿಚಾರದಲ್ಲಿ ಕೊಲೆಗೀಡಾದ ರಾಜೇಶ್ ಹಾಗೂ ರಾಮು ಮತ್ತು ಅಂದಿನ ಜೆಡಿಎಸ್ ಪಕ್ಷದ ಮೈಸೂರು ಪಾಲಿಕೆ ಸದಸ್ಯರಾಗಿದ್ದ ಅವ್ವಾ ಮಾದೇಶ್ ನಡುವೆ ವೈಷಮ್ಯವಿತ್ತು. ಇದೇ ವಿಚಾರವಾಗಿ ಅವ್ವಾ ಮಾದೇಶ್ ತನ್ನ ಸಹಚರರೊಂದಿಗೆ ರಾಜೇಶ್ ಹಾಗೂ ರಾಮುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹುಣಸೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿ ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಮೈಸೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2016ರ ಫೆ.26ರಂದು ಅವ್ವಾ ಮಾದೇಶ ಸೇರಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಎರಡು ಕೊಲೆಯನ್ನು ಪ್ರತ್ಯೇಕವಾಗಿ ಪರಿಗಣಿಸಿದ್ದ ನ್ಯಾಯಾಲಯ ಆರೋಪಿಗಳು ಮೊದಲ ಕೊಲೆಗೆ 14 ವರ್ಷ ಮತ್ತು ಎರಡನೇ ಕೊಲೆಗೆ 14 ವರ್ಷ, ಒಟ್ಟು 28 ವರ್ಷ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು. 9ನೆ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News