ಜನದಟ್ಟಣೆ ನೆಪವೊಡ್ಡಿ ಪಿಐಎಲ್ ಸಲ್ಲಿಕೆ: 20 ಸಾವಿರ ದಂಡ ವಿಧಿಸಿದ ಹೈಕೋರ್ಟ್

Update: 2018-08-14 16:30 GMT

ಬೆಂಗಳೂರು, ಆ.14: ದೇವಸ್ಥಾನದ ಮುಂದೆ ಜನ ದಟ್ಟಣೆ ಉಂಟಾಗುತ್ತದೆ ಎಂಬ ನೆಪವೊಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರೊಬ್ಬರಿಗೆ ಹೈಕೋರ್ಟ್ 20 ಸಾವಿರ ರೂ.ದಂಡ ವಿಧಿಸಿದೆ.

ಸುಮಿತ್ರಾ ಎಂಬುವರು ನಗರದ ಬಳೆಪೇಟೆಯಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಮುಂದೆ ಪೂಜಾ ಸಾಮಗ್ರಿ ಮಾರುವ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಅಂಗಡಿ ಸಮೀಪವೇ ಹೂವಿನ ಅಂಗಡಿಯೊಂದು ತಲೆ ಎತ್ತಿದೆ. ಇದನ್ನು ಆಕ್ಷೇಪಿಸಿ ಜಿ.ಸುಮಿತ್ರಾ ಪಿಐಎಲ್ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾ ಮಾಡಿ ದಂಡ ವಿಧಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸ್ವಾಮಿ, ಪ್ರತಿವಾದಿ ಚಿಕ್ಕಮುನಿರಾಜು ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದೇವಾಲಯದ ಮುಂದೆ ಹೂವಿನ ಅಂಗಡಿ ಇಟ್ಟುಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಧಾರ್ಮಿಕ ದತ್ತಿ ಇಲಾಖೆಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಇದನ್ನು ಆಧರಿಸಿ ದೇವಾಲಯದವರು ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ, ಇದರಿಂದ ದೇವಸ್ಥಾನದ ಮುಂದೆ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಉಪದ್ರವ ಉಂಟಾಗುತ್ತಿದೆ ಎಂದು ದೂರಿದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂದು ಪ್ರಶ್ನಿಸಿ ಅರ್ಜಿದಾರರು 20 ಸಾವಿರ ಮೊತ್ತವನ್ನು ದೇವಸ್ಥಾನಕ್ಕೆ ನೀಡಬೇಕು ಎಂದು ನಿರ್ದೇಶಿಸಿ ಅರ್ಜಿ ವಜಾ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News