ರಾಘವೇಶ್ವರ ಶ್ರೀಯನ್ನು ಆರೋಪದಿಂದ ಕೈಬಿಟ್ಟಿರುವ ಆದೇಶದಲ್ಲಿ ತೊಡಕಿದೆ: ಎ.ಎಸ್.ಪೊನ್ನಣ್ಣ

Update: 2018-08-14 16:33 GMT

ಬೆಂಗಳೂರು, ಆ.14: ರಾಘವೇಶ್ವರ ಶ್ರೀಯನ್ನು ಆರೋಪದಿಂದ ಕೈಬಿಟ್ಟಿರುವ ಆದೇಶದಲ್ಲಿ ಏನೇನು ತೊಡಕಿದೆ ಎಂಬುದನ್ನು ನಾನು ಕೋರ್ಟ್‌ಗೆ ಸ್ಪಷ್ಟವಾಗಿ ಮನದಟ್ಟು ಮಾಡಬಲ್ಲೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಹೈಕೋರ್ಟ್‌ಗೆ ತಿಳಿಸಿದರು.

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ನ್ಯಾಯಮೂರ್ತಿಗಳು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಸ್ವಾಮೀಜಿ ಪರ ವಕೀಲ ಪಿ.ಎನ್.ಮನಮೋಹನ್, ನಾವು ವಾದ ಮಂಡನೆಗೆ ಹಿರಿಯ ವಕೀಲ ರವಿ ಬಿ.ನಾಯ್ಕ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಸಮಯಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಂತ್ರಸ್ತೆಯ ಪರ ಹಾಜರಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ ಆಕ್ಷೇಪಿಸಿ, ಹೆಚ್ಚು ಸಮಯ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಪೊನ್ನಣ್ಣ, ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶ ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದರು. ನ್ಯಾಯಪೀಠ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ.

ಪ್ರಕರಣವೇನು: ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ನಡೆಸಿರುವ ಸೆಷನ್ಸ್ ನ್ಯಾಯಾಧೀಶ ಜಿ.ಬಿ. ಮುದಿಗೌಡರ್ ಸ್ವಾಮೀಜಿಯನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ಹೀಗಾಗಿ, ಈ ಕುರಿತಂತೆ 2016ರ ಮಾರ್ಚ್ 31ರಂದು ಮುದಿಗೌಡರ್ ನೀಡಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಈ ಮೇಲ್ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News