ಹಜ್‌ಗಾಗಿ ಸೇನಾ ಪಥ ಸಂಚಲನ

Update: 2018-08-14 18:06 GMT

ಜಿದ್ದಾ, ಆ. 14: ಸೌದಿ ಅರೇಬಿಯದ ಆಂತರಿಕ ಸಚಿವ ರಾಜಕುಮಾರ ಅಬ್ದುಲಝೀಝ್ ಬಿನ್ ಸೌದ್ ಬಿನ್ ನಯೀಫ್ ಸೋಮವಾರ ಹಜ್ ಭದ್ರತಾ ಪಡೆಗಳ ಸೇನಾ ಪಥಸಂಚಲನವನ್ನು ವೀಕ್ಷಿಸಿದರು.

ಉನ್ನತ ಹಜ್ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು, ಹಜ್ ಯಾತ್ರಿಕರ ಸೇವೆಗೆ ನಡೆಸಲಾಗುತ್ತಿರುವ ಸಿದ್ಧತೆಗಳನ್ನೂ ಪರಿಶೀಲಿಸಿದರು.

ಹಜ್ ಯಾತ್ರಿಕರಿಗೆ ಸುರಕ್ಷಿತ ಪರಿಸರವನ್ನು ಒದಗಿಸಲು ಸೌದಿ ಅರೇಬಿಯದ ಭದ್ರತಾ ಪಡೆಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ.

ಈ ಬಾರಿಯ ಹಜ್‌ನ ವ್ಯವಸ್ಥೆಯಲ್ಲಿ ತೊಡಗಿರುವ ಎಲ್ಲ ಕ್ಷೇತ್ರಗಳು ಸರ್ವ ಸನ್ನದ್ಧವಾಗಿವೆ ಎಂದು ರಾಜಕುಮಾರ ಅಬ್ದುಲಝೀಝ್ ಘೋಷಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಂತರಿಕ ಸಚಿವ ಜನರಲ್ ಸಯೀದ್ ಬಿನ್ ಅಬ್ದುಲ್ಲಾ ಅಲ್-ಕಹ್ತಾನಿ, ‘‘ಭದ್ರತಾ ಪಡೆಗಳು ಮಕ್ಕಾ, ಮದೀನಾ ಹಾಗೂ ಇತರ ಪವಿತ್ರ ಸ್ಥಳಗಳಲ್ಲಿ ಹಾಗೂ ಹಜ್ ನಿರ್ವಹಣೆ ಪ್ರದೇಶಗಳಿಗೆ ಹೋಗುವ ಎಲ್ಲ ರಸ್ತೆಗಳಲ್ಲಿ ತಮ್ಮ ಕರ್ತವ್ಯಗಳನ್ನು ಆರಂಭಿಸಿವೆ’’ ಎಂದು ಹೇಳಿದರು.

18 ನ್ಯಾಯಾಂಗ ಸಮಿತಿಗಳು, 6 ಚಲಿಸುವ ನೋಟರಿಗಳ ನಿಯೋಜನೆ

ಈ ಬಾರಿಯ ಹಜ್ ಋತುವಿನಲ್ಲಿ ಯಾತ್ರಿಕರಿಗೆ ಸೇವೆ ನೀಡಲು ಮಕ್ಕಾ, ಮಿನಾ ಮತ್ತು ಅರಫಾತ್‌ನಾದ್ಯಂತ 18 ನ್ಯಾಯಾಂಗ ಸಮಿತಿಗಳು ಮತ್ತು 6 ಚಲಿಸುವ ನೋಟರಿಗಳನ್ನು ನಿಯೋಜಿಸಿರುವುದಾಗಿ ಸೌದಿ ಕಾನೂನು ಸಚಿವಾಲಯ ಪ್ರಕಟಿಸಿದೆ.

‘‘ಹಜ್ ಋತುವಿನ ಅವಧಿಯಲ್ಲಿ ಕಾನೂನು ಸೇವೆಗಳನ್ನು ಒದಗಿಸಲು ಸಚಿವಾಲಯವು ತನ್ನೆಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಹಜ್‌ಗೆ ಸೌದಿ ಅರೇಬಿಯವು ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಯಾತ್ರಿಕರ ಪವಿತ್ರ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಸೇವೆ ಸಲ್ಲಿಸುವುದು ನಮ್ಮ ಭಾಗ್ಯವಾಗಿದೆ’’ ಎಂದು ಸಚಿವಾಲಯದ ಹಜ್ ಸಮಿತಿಯ ಮುಖ್ಯಸ್ಥ ಹಾಮದ್ ಅಲ್-ಖುಡೈರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News