ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಅಥ್ಲೀಟ್‌ಗಳು

Update: 2018-08-14 18:33 GMT

ಹೊಸದಿಲ್ಲಿ, ಆ.14: ಹದಿನೆಂಟನೇ ಆವೃತ್ತಿಯ ಏಶ್ಯಾಕಪ್ ಆ.18 ರಿಂದ ಸೆ.2ರ ತನಕ ಇಂಡೋನೇಶ್ಯಾದಲ್ಲಿ ನಡೆಯಲಿದ್ದು, ಈ ಬಾರಿ ಭಾರತಕ್ಕೆ ನೀರಜ್ ಚೋಪ್ರಾ, ದುತಿ ಚಂದ್, ಮುಹಮ್ಮದ್ ಅನಾಸ್ ಹಾಗೂ ಸೀಮಾ ಪೂನಿಯಾ ಪದಕದ ಭರವಸೆ ಮೂಡಿಸಿರುವ ಪ್ರಮುಖರಾಗಿದ್ದಾರೆ.

►ನೀರಜ್ ಚೋಪ್ರಾ: ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಿರುವ ಚೋಪ್ರಾ ಪ್ರಸ್ತುತ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶ್ರೇಷ್ಠ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಹರ್ಯಾಣದ ಜಾವೆಲಿನ್ ಎಸೆತಗಾರ ಚೋಪ್ರಾ ಗೋಲ್ಡ್‌ಕೋಸ್ಟ್‌ನಲ್ಲಿ ಈ ವರ್ಷ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಜಕಾರ್ತದಲ್ಲಿ ಚೀನಾ ಹಾಗೂ ದಕ್ಷಿಣ ಕೊರಿಯಾ ಅಥ್ಲೀಟ್‌ಗಳಿಂದ ತೀವ್ರ ಸ್ಪರ್ಧೆ ಎದುರಿಸಲಿದ್ದಾರೆ.

►ಮಹಿಳೆಯರ 4X400 ಮೀ.ರಿಲೇ: ಭಾರತ ಮಹಿಳೆಯರ 4X  400 ಮೀ. ರಿಲೇ ತಂಡ ಕಳೆದ 3 ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಮಿಂಚಿದೆ. 2006ರಲ್ಲಿ ದೋಹಾ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಭಾರತ 2010ರಲ್ಲಿ ಗ್ವಾಂಗ್‌ಝೌನಲ್ಲಿ ಇದೇ ಪ್ರದರ್ಶನ ಪುನರಾವರ್ತಿಸಿತು. 2014ರ ಇಂಚೋನ್ ಗೇಮ್ಸ್‌ನಲ್ಲಿ ಮೂರನೇ ಚಿನ್ನ ಜಯಿಸಿ ಹ್ಯಾಟ್ರಿಕ್ ಪೂರೈಸಿತು. ಈ ಬಾರಿ ಮತ್ತೊಂದು ಚಿನ್ನ ಜಯಿಸುವ ವಿಶ್ವಾಸದಲ್ಲಿರುವ ಭಾರತದ ರಿಲೇ ತಂಡಕ್ಕೆ 400 ಮೀ.ಜೂನಿಯರ್ ವಿಶ್ವ ಚಾಂಪಿಯನ್ ಹಿಮಾ ದಾಸ್ ಹೊಸ ಸೇರ್ಪಡೆಯಾಗಿದ್ದಾರೆ.

►ದುತಿ ಚಂದ್: ಒಡಿಶಾದ ಅಥ್ಲೀಟ್,ಭಾರತದ ವೇಗದ ಓಟಗಾರ್ತಿ ದುತಿ ಚಂದ್ ಲಿಂಗತ್ವ ಪರೀಕ್ಷೆಯಲ್ಲಿ ವಿಫಲರಾದ ಬಳಿಕ ಸುದೀರ್ಘ ದಾರಿ ಸಾಗಿದ್ದಾರೆ. ಏಶ್ಯಾಡ್‌ನಲ್ಲಿ 100 ಮೀ. ಹಾಗೂ 200 ಮೀ.ಓಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ. 100 ಮೀ.ನಲ್ಲಿ ಭಾರತ 1986ರಲ್ಲಿ ಕೊನೆಯ ಬಾರಿ ಪದಕ ಜಯಿಸಿತ್ತು. ಪಿ.ಟಿ.ಉಷಾ ಈ ಸಾಧನೆ ಮಾಡಿದ್ದರು.

►ಮುಹಮ್ಮದ್ ಅನಾಸ್: ಕೆಲವು ಸಮಯದಿಂದ ಮಿಲ್ಕಾ ಸಿಂಗ್ ನೆರಳನ್ನು ಹಿಂಬಾಲಿಸುತ್ತಿರುವ ಕೇರಳದ ಅಥ್ಲೀಟ್ ಅನಾಸ್ ಎಪ್ರಿಲ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 400 ಮೀ.ಓಟದಲ್ಲಿ ಫೈನಲ್‌ಗೆ ತಲುಪಿದ್ದರು. ‘ಫ್ಲೈಯಿಂಗ್ ಸಿಖ್’ ಮಿಲ್ಕಾ ಸಿಂಗ್ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದರು. ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಅನಾಸ್ 45.31 ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಕಳೆದ ತಿಂಗಳು ಝೆಕ್ ಗಣರಾಜ್ಯದಲ್ಲಿ ತನ್ನ ದಾಖಲೆ (45.24)ಉತ್ತಮಪಡಿಸಿಕೊಂಡಿದ್ದರು. ಅನಾಸ್ ಜಕಾರ್ತದಲ್ಲಿ ಫೈನಲ್‌ಗೆ ತಲುಪುವ ಫೇವರಿಟ್ ಅಥ್ಲೀಟ್.

►ಸೀಮಾ ಪೂನಿಯಾ: ಪ್ರತಿವರ್ಷವೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ಸೀಮಾ ಪೂನಿಯಾಗೆ ಕಳಂಕಿತೆ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. 2014ರಲ್ಲಿ ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಚಿನ್ನ ಜಯಿಸಿದ್ದ ಪೂನಿಯಾ ಕಾಮನ್‌ವೆಲ್ತ್ ಗೇಮ್ಸ್‌ಗೆ ಮೊದಲು ರಶ್ಯದಲ್ಲಿ ತನ್ನ ತರಬೇತಿಯ ಬಗ್ಗೆ ಟೀಕೆ ಎದುರಿಸಿದ್ದರು. ಆದಾಗ್ಯೂ ಆಸ್ಟ್ರೇಲಿಯದಲ್ಲಿ ಬೆಳ್ಳಿ ಜಯಿಸಿದ್ದರು. 35ರ ಹರೆಯದ ಪೂನಿಯಾ ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದಾರೆ.

►ಕಾಂಪೌಂಡ್ ಇವೆಂಟ್ಸ್:ಭಾರತ ಈ ಬಾರಿ ಆರ್ಚರಿಯ ಕಾಂಪೌಂಡ್ ವಿಭಾಗದಲ್ಲಿ ಪದಕದ ನಿರೀಕ್ಷೆಯಲ್ಲಿದೆ. ಈ ಬಾರಿಯ ಗೇಮ್ಸ್‌ನಲ್ಲಿ ಮೊದಲ ಬಾರಿ ನಡೆಯುತ್ತಿರುವ ಕಾಂಪೌಂಡ್ ಮಿಕ್ಸೆಡ್ ಇವೆಂಟ್‌ನಲ್ಲಿ ಭಾರತ ಪದಕ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ. ಈ ವರ್ಷನಡೆದ ಎಲ್ಲ 4 ವಿಶ್ವಕಪ್‌ಗಳಲ್ಲಿ ಜ್ಯೋತಿ ಹಾಗೂ ಅಭಿಷೇಕ್ ನಾಲ್ಕು ಕಂಚು ಜಯಿಸಿದ್ದಾರೆ. ಜ್ಯೋತಿ, ತ್ರಿಶಾ, ಮುಸ್ಕಾನ್ ಹಾಗೂ ಮಧುಮತಿ ಅವರನ್ನೊಳಗೊಂಡ ಭಾರತದ ಮಹಿಳಾ ಕಾಂಪೌಂಡ್ ತಂಡ ಈ ಬಾರಿ ನಂ.1 ತಂಡವಾಗಿ ಗೇಮ್ಸ್‌ಗೆ ತೆರಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News