ಇಂಗ್ಲೆಂಡ್ ವಿರುದ್ಧ್ದ ಟೆಸ್ಟ್ ಸರಣಿ: ಕೊಹ್ಲಿ-ಶಾಸ್ತ್ರಿಗೆ ಅಗ್ನಿಪರೀಕ್ಷೆ

Update: 2018-08-14 18:40 GMT

ಲಂಡನ್, ಆ.14: ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ಇತ್ತೀಚೆಗಿನ ದಿನಗಳಲ್ಲಿ ಭಾರತ ಕ್ರಿಕೆಟ್‌ನ ಉತ್ತಮ ನಾಯಕ ಹಾಗೂ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಶಾಸ್ತ್ರಿಯವರ ಪೂರ್ವಾಧಿಕಾರಿ ಅನಿಲ್ ಕುಂಬ್ಳೆ ಅವರು ನಾಯಕನೊಂದಿಗಿನ ಭಿನ್ನಾಭಿಪ್ರಾಯದಿಂದ ಕೋಚ್ ಹುದ್ದೆ ತೊರೆದಿದ್ದರು. ಕೊಹ್ಲಿಯೊಂದಿಗೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬಲ್ಲರು ಎಂಬ ಕಾರಣಕ್ಕೆ ಶಾಸ್ತ್ರಿಯವರನ್ನು ಭಾರತದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು.

 ಭಾರತ ಸ್ವದೇಶಿ ನೆಲದಲ್ಲಿ ಕ್ರಿಕೆಟ್ ಆಡುವಾಗ ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಆದರೆ, ದಕ್ಷಿಣ ಆಫ್ರಿಕ ಹಾಗೂ ಇದೀಗ ಇಂಗ್ಲೆಂಡ್ ನೆಲದಲ್ಲಿ ಫಲಿತಾಂಶ ಭಾರತ ಪರವಾಗಿ ಬರುತ್ತಿಲ್ಲ. ವೀರೋಚಿತ ಸೋಲನ್ನು ಒಪ್ಪಿಕೊಳ್ಳಬಹುದು. ಆದರೆ, ಕೆಲವು ತಪ್ಪು ನಿರ್ಧಾರಗಳೇ ಸೋಲಿಗೆ ಕಾರಣವಾದರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ.

ಮೊದಲ ಟೆಸ್ಟ್ ಪಂದ್ಯ ನಡೆದಿದ್ದ ಬರ್ಮಿಂಗ್‌ಹ್ಯಾಮ್‌ನ ಒಣಗಿರುವ ಪಿಚ್‌ನಲ್ಲಿ ಟೆಸ್ಟ್ ಪಂದ್ಯದ ಏಳನೇ ಓವರ್‌ನಲ್ಲಿ ಸ್ಪಿನ್ನರ್ ಆರ್.ಅಶ್ವಿನ್‌ಗೆ ಬೌಲಿಂಗ್ ಅವಕಾಶ ನೀಡಲಾಗಿತ್ತು. ಭಾರತ ಕೇವಲ ಒಂದು ಸ್ಪಿನ್ನರ್‌ನೊಂದಿಗೆ ಆಡಿತ್ತು. 2ನೇ ಟೆಸ್ಟ್ ಪಂದ್ಯ ನಡೆದಿದ್ದ ಲಾರ್ಡ್ಸ್‌ನಲ್ಲಿ ಮೊದಲ ದಿನದ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿತ್ತು. ಮೋಡ ಕವಿದ ವಾತಾವರಣ ಸ್ವಿಂಗ್ ಬೌಲಿಂಗ್‌ಗೆ ಸೂಕ್ತವಾಗಿತ್ತು. ಆದರೆ, ಕುಲ್‌ದೀಪ್ ಯಾದವ್‌ರನ್ನು ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಸಿ ಅಚ್ಚರಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

‘‘ಇದು ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ಧಾರ’’ ಎಂದು ಸುದ್ದಿಗೋಷ್ಠಿಯಲ್ಲಿ ಭಾರತದ ಆಟಗಾರನೊಬ್ಬ ಪ್ರತಿಕ್ರಿಯಿಸಿದ್ದ. ಇದರರ್ಥ ಎರಡೂ ಟೆಸ್ಟ್‌ನಲ್ಲಿ ಕೊಹ್ಲಿ ಹಾಗೂ ಶಾಸ್ತ್ರಿ ಅವರು ಒಟ್ಟಿಗೆ ರಚಿಸಿದ್ದ ರಣನೀತಿ ತಿರುಗುಬಾಣವಾಗಿದೆ.

‘‘ಪಿಚ್ ಹೇಗೆ ವರ್ತಿಸುತ್ತದೆ ಎಂದು ಯಾರಾದರೊಬ್ಬರು ಕ್ಯುರೇಟರ್ ಬಳಿ ಕೇಳಿದ್ದು ನನಗೆ ನೆನಪಿಲ್ಲ. ಎರಡು ದಿನಗಳ ಕಾಲ ನಿರಂತರ ಮಳೆ ಸುರಿದ ಕಾರಣ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಅಗತ್ಯವಿರಲಿಲ್ಲ’’ ಎಂದು ಲಾರ್ಡ್ಸ್ ಪಿಚ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಗುಂಪು ಅಭಿಪ್ರಾಯಪಟ್ಟಿದೆ.

 ‘‘ಕೋಚ್‌ಗಳು ಏನು ಮಾಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಪ್ರತಿ ಇನಿಂಗ್ಸ್‌ನಲ್ಲೂ ಭಾರತದ ದಾಂಡಿಗರು ಕ್ಷುಲ್ಲಕ ತಪ್ಪು ಮಾಡುತ್ತಿದ್ದಾರೆ. ಯಾರಾದರೊಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ’’ ಎಂದು ಭಾರತದ ಮಾಜಿ ವಿಕೆಟ್‌ಕೀಪರ್ ಫಾರೂಖ್ ಇಂಜಿನಿಯರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News