ಸಚಿನ್ ಚೊಚ್ಚಲ ಶತಕಕ್ಕೆ 28 ವರ್ಷ ಸಂಭ್ರಮ

Update: 2018-08-14 18:49 GMT

  ಹೊಸದಿಲ್ಲಿ, ಆ.14: ಕ್ರಿಕೆಟ್ ದಂತಕತೆ, ‘ಮಾಸ್ಟರ್ ಬ್ಲಾಸ್ಟರ್’ ಖ್ಯಾತಿಯ ಭಾರತದ ಮಾಜಿ ಆಟಗಾರ ಸಚಿನ್ ತೆಂಡುಲ್ಕರ್ ಅವರ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕಕ್ಕೆ 28 ವರ್ಷ ಸಂಭ್ರಮ.

ತೆಂಡುಲ್ಕರ್ 2013ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮೊದಲು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕಗಳನ್ನು (ಟೆಸ್ಟ್‌ನಲ್ಲಿ 51, ಏಕದಿನದಲ್ಲಿ 49)ಸಿಡಿಸಿದ ಮೊದಲ ಆಟಗಾರ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.

ತೆಂಡುಲ್ಕರ್ ಸರಿಯಾಗಿ 28 ವರ್ಷಗಳ ಹಿಂದೆ ಚೊಚ್ಚಲ ಶತಕ ಸಿಡಿಸಿದ್ದರು. ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ತೆಂಡುಲ್ಕರ್ ಈ ಸಾಧನೆ ಮಾಡಿದ್ದರು.

  ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 519 ರನ್ ಗಳಿಸಿ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ತೆಂಡುಲ್ಕರ್(68) ಹಾಗೂ ನಾಯಕ ಮುಹಮ್ಮದ್ ಅಝರುದ್ದೀನ್(179) ನೆರವಿನಿಂದ ಭಾರತ 432 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 4ಕ್ಕೆ 320 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಭಾರತದ ಗೆಲುವಿಗೆ 408 ರನ್ ಗುರಿ ನೀಡಿತ್ತು. ಕ್ಷಿಪ್ರವಾಗಿ ವಿಕೆಟ್ ಕಳೆದುಕೊಂಡ ಭಾರತ ಒಂದು ಹಂತದಲ್ಲಿ 127 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ 17ರ ಹರೆಯದ ತೆಂಡುಲ್ಕರ್ ತಂಡಕ್ಕೆ ಆಸರೆಯಾಗಿ ನಿಂತರು. 17 ಬೌಂಡರಿಗಳ ನೆರವಿನಿಂದ ಚೊಚ್ಚಲ ಶತಕ ಸಿಡಿಸಿದರು. ತೆಂಡುಲ್ಕರ್ ಚೊಚ್ಚಲ ಶತಕ ಸಿಡಿಸಿದಾಗ ಅವರ ವಯಸ್ಸು 17 ವರ್ಷ, 112 ದಿನಗಳು. ಆಗ ಅವರು ಟೆಸ್ಟ್ ಶತಕ ಸಿಡಿಸಿದ 3ನೇ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ತೆಂಡುಲ್ಕರ್ ಸಿಡಿಸಿದ್ದ 119 ರನ್ ಹಾಗೂ ಮನೋಜ್ ಪ್ರಭಾಕರ್ ಅರ್ಧಶತಕದ ಕೊಡುಗೆಯ ನೆರವಿನಿಂದ ಕೊನೆಯ ದಿನದಾಟದಂತ್ಯಕ್ಕೆ ಭಾರತ 6ಕ್ಕೆ 343 ರನ್ ಗಳಿಸಿ ಪಂದ್ಯ ಡ್ರಾಗೊಳಿಸಿತ್ತು.

ತೆಂಡುಲ್ಕರ್ ಗಳಿಸಿರುವ 51 ಟೆಸ್ಟ್ ಶತಕಗಳ ಪೈಕಿ ಇಂಗ್ಲೆಂಡ್ ವಿರುದ್ಧವೇ 7 ಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News