ಧ್ವಜಾರೋಹಣ ಮಾಡುತ್ತಿದ್ದಾಗ ಎಡವಟ್ಟು: ತ್ರಿವರ್ಣ ಧ್ವಜವನ್ನು ನೆಲಕ್ಕೆ ಬೀಳಿಸಿದ ಅಮಿತ್ ಶಾ

Update: 2018-08-15 14:10 GMT

ಹೊಸದಿಲ್ಲಿ, ಆ.15: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 72ನೆ ಸ್ವಾತಂತ್ರ್ಯೋತ್ಸವದ ಸಂದರ್ಭ ಧ್ವಜಾರೋಹಣ ಮಾಡುತ್ತಿದ್ದಾಗ ತ್ರಿವರ್ಣ ಧ್ವಜ ನೆಲಕ್ಕೆ ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ವಿರೋಧ ಪಕ್ಷಗಳು ಇದೇ ವಿಡಿಯೋವನ್ನು ಮುಂದಿಟ್ಟಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿವೆ.

“ತ್ರಿವರ್ಣ ಧ್ವಜವನ್ನು ಹಿಡಿಯಲು ಸಾಧ್ಯವಿಲ್ಲದವರು ದೇಶವನ್ನು ಹೇಗೆ ಮುನ್ನಡೆಸಿಯಾರು?” ಎಂದು ಕಾಂಗ್ರೆಸ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಪ್ರಶ್ನಿಸಿದೆ. “ದೇಶಪ್ರೇಮದ ಸರ್ಟಿಫಿಕೇಟ್ ಕೊಡುವವರಿಗೆ ರಾಷ್ಟ್ರಗೀತೆಯನ್ನು ಹಾಡಲೂ ಬರುವುದಿಲ್ಲ” ಎಂದು ಅದು ಟ್ವೀಟ್ ನಲ್ಲಿ ತಿಳಿಸಿದೆ.

ಬುಧವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕರು, ಕೇಂದ್ರ ಸಚಿವರು ಭಾಗವಹಿಸಿದ್ದರು. ಪಕ್ಷಾಧ್ಯಕ್ಷ ಅಮಿತ್ ಶಾ ಧ್ವಜಾರೋಹಣ ನೆರವೇರಿಸಿದರು. ಆದರೆ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ ಧ್ವಜಸ್ತಂಭದ ಮೇಲೆ ಹೋಗಿ ಹರಡಬೇಕಿದ್ದ ತ್ರಿವರ್ಣ ಧ್ವಜ ಸೀದಾ ಕೆಳಗೆ ಬಂದು ನೆಲಕ್ಕೇ ಬಿದ್ದು ಬಿಟ್ಟಿತು. ತೀವ್ರ ಮುಖಭಂಗಗೊಂಡರೂ ಅದನ್ನು ತೋರಿಸದ ಅಮಿತ್ ಶಾ ತಕ್ಷಣ ಧ್ವಜದ ಇನ್ನೊಂದು ಹಗ್ಗವನ್ನು ಎಳೆದರು. ಬಳಿಕ  ಧ್ವಜ ಮೇಲೆ ಹೋಗಿ ಹಾರಾಡಿತು. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಸ್ತುವಾಗಿದೆ. 

ದೂರದರ್ಶನದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರದ ನಿರೂಪಣೆ ನಡೆಸುತ್ತಿದ್ದ ನಿರೂಪಕ ಈ ಧ್ವಜ ಕೆಳಗೆ ಬೀಳುವ ದೃಶ್ಯ ನೋಡಿ ಆಘಾತಗೊಂಡು "tch tch tch... Disaster..." ( ತ್ಚ್.. ತ್ಚ್.. ತ್ಚ್..  ದುರಂತ ... ) ಎಂದು ಹೇಳಿರುವುದು ಅದೇ ರೀತಿ ಪ್ರಸಾರವಾಗಿದೆ. 

ದೇಶಪ್ರೇಮದ ಬಗ್ಗೆ ಇತರರಿಗೆ ಪಾಠ ಹೇಳುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ದೇಶದ ಧ್ವಜಾರೋಹಣ ಮಾಡುವಾಗ ಇಂತಹ ಪ್ರಮಾದ ಹೇಗೆ ನಡೆಯಿತು ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಕೆಲವರು ಅಮಿತ್ ಶಾ ಹಾಗು ಅವರ ಪಕ್ಷವನ್ನು ತಮಾಷೆ ಮಾಡಲು ಈ ಸಂದರ್ಭವನ್ನು ಬಳಸಿಕೊಂಡರೆ ಇನ್ನು ಕೆಲವರು ಸಹಜ ಆಘಾತ ವ್ಯಕ್ತಪಡಿಸಿದ ಆ ನಿರೂಪಕನಿಗೆ ಏನೂ ಆಗದಿದ್ದರೆ ಸಾಕು ಎಂದು ಅಮಿತ್ ಷಾ ಅವರಿಗೆ ಪರೋಕ್ಷವಾಗಿ ಚುಚ್ಚಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News