ಬೆಂಗಳೂರಿನಲ್ಲಿ ಡಿಪೋರ್ಟೇಷನ್ ಸೆಂಟರ್ ಸ್ಥಾಪನೆಗೆ ಕೇಂದ್ರಕ್ಕೆ ಮನವಿ

Update: 2018-08-15 18:35 GMT

ಬೆಂಗಳೂರು, ಆ.15: ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ರಾಷ್ಟ್ರದ ಭದ್ರತೆ ಹಾಗೂ ಐಕತ್ಯೆಗೆ ಮಾರಕವಾಗಿದೆ. ಅಕ್ರಮ ವಲಸೆಗಾರರನ್ನು ವಾಪಸ್ ಕಳುಹಿಸಲು ಬೆಂಗಳೂರಿನಲ್ಲಿ ಡಿಪೋರ್ಟೇಷನ್ ಸೆಂಟರ್ ಸ್ಥಾಪನೆ ಮಾಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹಾಗೂ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜುರನ್ನು ಭೇಟಿ ಮಾಡಿದ ಅರವಿಂದ ಲಿಂಬಾವಳಿ, ಬಾಂಗ್ಲಾದೇಶಿಯರು ಹಾಗೂ ಕಾನೂನು ಬಾಹಿರವಾಗಿ ನೆಲೆಸಿರುವ ವಿದೇಶಿಯರು ನಮ್ಮ ದೇಶದ ಐಕ್ಯತೆ ಹಾಗೂ ಭದ್ರತೆಗೆ ಮಾರಕವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಬಾಂಗ್ಲಾದೇಶಿಯರು ಹಾಗೂ ಆಫ್ರಿಕಾ ದೇಶದವರು ಕಾನೂನು ಬಾಹಿರವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವರುಗಳು ಮಾದಕ ದ್ರವ್ಯ ಮಾರಾಟ, ವೈಶ್ಯಾವಾಟಿಕೆ, ಆನ್‌ಲೈನ್ ವಂಚನೆ, ಮಳೆಗಳ್ಳತನ, ದರೋಡೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಕೇಂದ್ರ ಸರಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕಾಲಮಿತಿಯಲ್ಲಿ ಈ ವಿಷಯದ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮಾಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ ಕೇಂದ್ರ ಸರಕಾರ, ರಾಜ್ಯ ಸರಕಾರಕ್ಕೆ ಡಿಪೋರ್ಟೇಷನ್ ಸೆಂಟರ್ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಂಡು ವರದಿ ಮಾಡುವಂತೆ ನಿರ್ದೇಶನ ನೀಡಿದೆ. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ದತ್ತಾತ್ರೇಯ ಸಿ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News