ಬೆಂಗಳೂರು: 72ನೆ ಸ್ವಾತಂತ್ರ್ಯ ದಿನಾಚರಣೆ; ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

Update: 2018-08-15 14:33 GMT

ಬೆಂಗಳೂರು, ಆ.15: ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ 72 ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮುದಗೊಳಿಸಿದವು. ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ವೀರರ ಮತ್ತು ವೀರನಾರಿಯರ ವೇಷಧಾರಿಗಳು, ಮೈ ಮೇಲೆ ತ್ರಿವರ್ಣ ರಂಗು, ಬಾನಂಗಳದಲ್ಲಿ ಹಾರಾಡುತ್ತಿದ್ದ ತ್ರಿವರ್ಣ ಬಲೂನ್‌ಗಳು, ರಾಷ್ಟ್ರ ಧ್ವಜದ ಮೇಲೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ನೋಡುಗರ ಕಣ್ಮನ ಸೆಳೆದವು.

ಗೃಹಲಕ್ಷ್ಮಿ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ನೆಲಗದರನಹಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 650 ವಿದ್ಯಾರ್ಥಿಗಳು ಅಭಿನಯಿಸಿದ ‘ಕ್ರಾಂತಿವೀರ ಮುಂಡರಗಿ ಭೀಮರಾಯ’ ನೃತ್ಯ ರೂಪಕವು ನೋಡುಗರ ಮೈನವಿರೇಳಿಸುವಂತೆ ಮಾಡಿತು. 1857 ರಲ್ಲಿ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಅಸಂಖ್ಯಾತ ದೇಶಭಕ್ತರು ತಮ್ಮ ಭೇದ-ಭಾವಗಳನ್ನು ತೊರೆದು ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯಲು ಮೈ ಕೊಡವಿ ಘರ್ಜಿಸಿ, ಹೋರಾಡಿದ ಮುಂಡರಗಿ ಭೀಮರಾಯ ಕುರಿತ 10 ನಿಮಿಷಗಳ ನೃತ್ಯ ಕಣ್ಣಿಗೆ ಕಟ್ಟುವಂತಿತ್ತು. ಭೈರವೇಶ್ವರ ನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ 650 ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಸ್ವಾತಂತ್ರ ಹೋರಾಟಗಾರ ಉಜ್ವಲ ದೇಶಭಕ್ತ ಮೈಲಾರ ಮಹಾದೇವ’ ನೃತ್ಯವು ಅಹಿಂಸಾ ತತ್ವವನ್ನು ಸಾರುತ್ತಿತ್ತು. 1942 ರಲ್ಲಿ ಗಾಂಧಿ ನೇತೃತ್ವದಲ್ಲಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ನಿರ್ಣಯ ಕೈಗೊಂಡು, ಮಾಡು ಇಲ್ಲವೇ ಮಡಿ ಎಂದು ಘೋಷಿಸಿದ್ದರು. ಅದರ ಕರ್ನಾಟಕದ ನೇತೃತ್ವ ವಹಿಸಿಕೊಂಡು ಚಳವಳಿ ನಡೆಸಿದ ಮೈಲಾರ ಮಹಾದೇವ ಕುರಿತ ನೃತ್ಯ ರೂಪಕವಾಗಿತ್ತು. ಇಡೀ ನೃತ್ಯದಲ್ಲಿ ಭಾರತ ಸ್ವತಂತ್ರ ಮಾಡುವುದೊಂದೇ ಗುರಿ ಎಂಬ ಸಂದೇಶವಿದ್ದರೆ, ಎಲ್ಲಿಯೂ ಅವರು ಹಿಂಸಾ ಮಾರ್ಗವನ್ನು ಅನುಸರಿಸಿ ಎಂದು ಘೋಷಿಸಿಲ್ಲ ಎಂಬುದನ್ನು ಸಾರಿ ಹೇಳುತ್ತಿತ್ತು.

ಬಿಸ್ಮಿಲ್ಲಾ ನಗರದ ಲಿಲ್ಲಿರೋಸ್ ಪ್ರೌಢಶಾಲೆಯ 700 ಮಕ್ಕಳು ನಡೆಸಿಕೊಟ್ಟ ‘ಜೈ ಹಿಂದ್ ಜೈ ಭಾರತ’ ನೃತ್ಯ ರೂಪಕವು ಗಡಿಯಲ್ಲಿ ಕೆಲಸ ಮಾಡುವ ಸೈನಿಕರ, ಅವರ ನೇರ ಹೊಣೆಗಾರಿಕೆ ಮತ್ತು ದಿಟ್ಟ ಎದೆಗಾರಿಕೆಯನ್ನು ಅನಾವರಣ ಮಾಡಿದರು. ಅತಿ ಎತ್ತರ ಪ್ರದೇಶಗಳಾದ ಪರ್ವತಾಚ್ಛಾದಿತ, ಕಾರ್ಗಿಲ್, ಲಡಾಕ್, ಪಾಮೀರ್, ಪೂಂಚ್ ಗಡಿ ಪ್ರದೇಶಗಳಲ್ಲಿ ಸೈನಿಕರ ಸೇವೆಯನ್ನು ಸ್ಮರಿಸಿದರು. ಅಲ್ಲದೆ, ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದರು. 10 ನಿಮಿಷಗಳ ಕಾಲ ನೃತ್ಯದಲ್ಲಿ ಸೇನೆ, ಸೈನಿಕರು, ಶತ್ರುಗಳ ನುಸುಳುವಿಕೆ, ಯುದ್ಧ, ಸೈನಿಕ ತ್ಯಾಗವನ್ನು ಅನಾವರಣ ಮಾಡಿದರು.

ಬೈಕ್ ಸಾಹಸ ಪ್ರದರ್ಶನ: ಸೇನಾ ಸೇವಾ ದಳದ (ಎಎಸ್‌ಸಿ) ದಕ್ಷಿಣ ವಿಭಾಗದ ಯೋಧರು ನಡೆಸಿಕೊಟ್ಟ ಸಾಹಸ ಬೈಕ್ ಪ್ರದರ್ಶನ ಪ್ರೇಕ್ಷಕರ ಮೈಜುಮ್ಮೆನಿಸಿತು. ಮೇಜರ್ ಎಸ್.ಎಸ್.ರಾಥೋಡ್ ನೇತೃತ್ವದಲ್ಲಿ 20 ಯೋಧರು ಬೈಕ್ ಸಾಹಸ ಪ್ರದರ್ಶಿಸಿದರು.

ಬುಲೆಟ್ ಬೈಕ್‌ಗಳ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಕಾಲು ಮೇಲೆ ಮಾಡಿ, ಚಲಿಸುತ್ತಿರುವ ಬೈಕ್ ಮೇಲೆ ಏಣಿ ಏರುವ ಮೂಲಕ ಯೋಧರು ನೆರದವರನ್ನು ರೋಮಾಂಚನಗೊಳಿಸಿದರು. ಬೈಕ್‌ಗಳ ಮೇಲೆ ಮಾನವ ಪಿರಮಿಡ್, ಹೂವಿನ ಹಾಗೂ ಮರದ ಮಾದರಿಗಳನ್ನು ಸೃಷ್ಟಿಸಿ ನೆರೆದ ಪ್ರೇಕ್ಷಕರನ್ನು ಚಕಿತಗೊಳಿಸಿದರು. ಅಲ್ಲದೆ, ಟ್ಯೂಬ್‌ಲೈಟ್ ಜಿಗಿತ ಮತ್ತು ಬೆಂಕಿ ಚಕ್ರದೊಳಗಿನ ಜಿಗಿತದ ಕಸರತ್ತುಗಳು ನೋಡುಗರನ್ನು ನಿಬ್ಬೆರಗಾಗಿಸಿದವು.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಮಟ್ಟದಲ್ಲಿ ಸ್ವರ್ಣ ಪದಕ ಪಡೆದ ಮದ್ರಾಸ್ ಇಂಜಿನಿಯರಿಂಗ್ ಯೋಧರ ತಂಡದಿಂದ ಜಿಮ್ನಾಸ್ಟಿಕ್ ಪ್ರದರ್ಶನ ನಡೆಯಿತು. ಇದನ್ನು ಸಾವಿರಾರು ಜನ ನೋಡಿ ಕಣ್ತುಂಬಿಕೊಂಡರು. ಸ್ಟಂಟ್ ಮಾಸ್ಟರ್‌ಗಳ ದೈಹಿಕ ಕಸರತ್ತಿಗೆ ಎಲ್ಲರೂ ಒಂದು ಕ್ಷಣ ಆಶ್ಚರ್ಯದಿಂದ ನೋಡುತ್ತಿರುವುದು ಕಂಡುಬಂತು. ಇದು ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿತ್ತು.

ಗಮನ ಸೆಳೆದ ಪಥಸಂಚಲನ: 72ನೆ ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಸಾಕ್ಷಿಯಾಯಿತು. ಸಮಾರಂಭದಲ್ಲಿ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದರೆ, ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಅದೇ ವೇಳೆಗೆ ವಾಯುಪಡೆಯ ಹೆಲಿಕಾಪ್ಟರ್ ಆಗಸದಿಂದ ಗುಲಾಬಿ ಹೂ ದಳಗಳನ್ನು ಸುರಿಸಿತು. ನಂತರ ಮೈಸೂರು ಇಂಗ್ಲಿಷ್ ಬ್ಯಾಂಡ್ ಸಾರೆ ಜಹಾಂಸೆ ಅಚ್ಚಾ ವಾದ್ಯಕ್ಕೆ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ, ಎಎನ್‌ಸಿ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶ್ವಾನ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿ, ಮುಖ್ಯಮಂತ್ರಿಗೆ ಗೌರವ ವಂದನೆ ಸಲ್ಲಿಸಿದರು.

ಪ್ರಶಸ್ತಿ ವಿತರಣೆ: ಬಿಸ್ಮಿಲ್ಲಾ ನಗರದ ಲಿಲ್ಲಿರೋಸ್ ಪ್ರೌಢಶಾಲೆ ಮಕ್ಕಳ ‘ಜೈ ಹಿಂದ್ ಜೈ ಭಾರತ’ ನೃತ್ಯಕ್ಕೆ ಪ್ರಥಮ, ಗೃಹಲಕ್ಷ್ಮಿ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ನೆಲಗದರನಹಳ್ಳಿ ಶಾಲೆಯ ಮಕ್ಕಳು ಪ್ರದರ್ಶಿಸಿದ ಕ್ರಾಂತಿವೀರ ಮುಂಡರಗಿ ಭೀಮರಾಯ ನೃತ್ಯಕ್ಕೆ ದ್ವಿತೀಯ ಹಾಗೂ ಭೈರವೇಶ್ವರನಗರ ಬಿಬಿಎಂಪಿ ಶಾಲೆ ಮಕ್ಕಳು ಪ್ರದರ್ಶಿಸಿದ ದೇಶಭಕ್ತ ಮೈಲಾರ ಮಹಾದೇವ ನೃತ್ಯಕ್ಕೆ ತೃತೀಯ ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News