ಬೆಂಗಳೂರು: ನಗರದಾದ್ಯಂತ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ

Update: 2018-08-15 14:40 GMT

ಬೆಂಗಳೂರು, ಆ.15: ನಗರದಾದ್ಯಂತ ಭಿನ್ನವಾದ ರೀತಿಯಲ್ಲಿ 72 ನೆ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಕೆಲವರು ಕೆನ್ನೆಗಳಿಗೆ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡಿದ್ದರೆ, ಹಲವು ಸ್ಥಳಗಳಲ್ಲಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಮೂಡುವ ಹಾಗೆ ಹೇರ್ ಕಟಿಂಗ್ ಮಾಡಿಕೊಂಡಿದ್ದಾರೆ. ನಾಗರಾಜ್ ಮತ್ತು ರಾಮು ಎಂಬುವವರು ತಲೆಯ ಹಿಂದೆ ಸ್ವಾತಂತ್ರ ಹೋರಾಟಗಾರ, ಅಪ್ರತಿಮ ದೇಶಪ್ರೇಮಿ ಭಗತ್‌ಸಿಂಗ್ ಹಾಗೂ ಸುಭಾಷ್ ಚಂದ್ರಬೋಸ್‌ರ ಚಿತ್ರಗಳನ್ನು ಬಿಡಿಸಿಕೊಳ್ಳುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ನಗರದ ಎಲ್ಲ ಸರಕಾರಿ ಕಚೇರಿಗಳು, ಸಂಘ-ಸಂಸ್ಥೆಗಳು, ವೃತ್ತಗಳು, ಎಲ್ಲ ವಾರ್ಡ್‌ಗಳ ಶಾಲೆ, ಆಸ್ಪತ್ರೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ ದಿನಾಚರಣೆ ಆರಚಣೆ ಮಾಡಲಾಯಿತು.

72 ನೆ ಸ್ವಾತಂತ್ರೋತ್ಸವದ ಅಂಗವಾಗಿ ಗೋಲ್ಡನ್ ಜಿಮ್ ವತಿಯಿಂದ ಬಸವೇಶ್ವರ ನಗರದಲ್ಲಿ 200 ಕ್ಕೂ ಅಧಿಕ ಜನರಿಂದ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರ ನಗರದಿಂದ ಆರಂಭಿಸಿ ಶಂಕರಮಠ, ರಾಜಾಜಿನಗರ ಸುತ್ತಮುತ್ತ ಸುಮಾರು ಐದು ಕಿ.ಮೀ.ನಷ್ಟು ಓಟದ ಮೂಲಕ ವಂದೇ ಮಾತರಂ ಘೋಷಣೆಗಳು ಕೂಗಿದರು.

ಆಟೋಗಳಲ್ಲಿ ಧ್ವಜ ಹಾರಾಟ: ನಗರದಲ್ಲಿ ಸಂಚರಿಸುವ ಬಹುತೇಕ ಆಟೋಗಳಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಟೋ ಮೇಲೆ ಸಣ್ಣ ಧ್ವಜದಿಂದ ಬೃಹತ್ ಧ್ವಜಗಳು ಹಾರಾಡುತ್ತಿದ್ದವು. ಕೆಲವು ಆಟೋಗಳಲ್ಲಂತೂ ದೇಶ ಭಕ್ತಿಗೀತೆಗಳು ಮೊಳಗುತ್ತಿದ್ದವು.

ಕೆ.ಆರ್.ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕಿಸುವ ಬಾಲ ಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ 30 ಮೀ ಉದ್ದದ ಧ್ವಜ ಕಟ್ಟಲಾಗಿದ್ದು, ಸೇತುವೆ ಮೇಲೆ ಸಂಚರಿಸುವ ಎಲ್ಲಾ ನಾಗರಿಕರ ಗಮನ ಸೆಳೆಯುತ್ತಿತ್ತು. ಜೈ ಕರ್ನಾಟಕ ಸಂಘಟನೆಯ ವತಿಯಿಂದ 72 ಮೀಟರ್ ಉದ್ದದ ಹಾಗೂ ದಾಸರಹಳ್ಳಿ ಶಾಸಕ ಪಿ.ಎನ್. ಕೃಷ್ಣಮೂರ್ತಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 250 ಮೀ. ಉದ್ದದ ಧ್ವಜ ಮೆರವಣಿಗೆ ನಡೆಸಿದರು.

ಪೊಲೀಸರ ಕಣ್ಗಾವಲು: ರಾಜಭವನ, ವಿಧಾನಸೌಧ, ಕಾರ್ಪೊರೇಷನ್, ಟೌನ್‌ಹಾಲ್, ಎಂಜಿ ರಸ್ತೆ, ಶಿವಾಜಿನಗರ, ನಾಯಂಡಹಳ್ಳಿ, ವಿಜಯನಗರ, ಕೆ.ಆರ್. ಮಾರ್ಕೇಟ್ ಸೇರಿದಂತೆ ನಗರದ ಬಹುತೇಕ ಎಲ್ಲಾ ರಸ್ತೆಯಲ್ಲಿ ಸಂಚಾರಿ ಪೊಲೀಸರು ಕಣ್ಗಾವಲಿತ್ತು.

ಮಧ್ಯರಾತ್ರಿ ಆಚರಣೆ: ಸಂವಿಧಾನ ರಕ್ಷಣೆಗಾಗಿ, ಸ್ವಾತಂತ್ರ ಹೋರಾಟದ ಆಶಯ ಈಡೇರಿಕೆಗಾಗಿ, ದೇಶದ ಐಕ್ಯತೆ, ಶಾಂತಿಯುತ, ಸಹಬಾಳ್ವೆ ಮತ್ತು ಕೋಮು ಸೌಹಾರ್ದತೆಗಾಗಿ ಸಿಐಟಿಯು, ಕೆಪಿಆರ್‌ಎಸ್ ಸೇರಿದಂತೆ ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆಗಳ ವತಿಯಿಂದ ನಗರದ ಪುರಭವನದ ಎದುರು ಸ್ವಾತಂತ್ರೋತ್ಸವ ಸತ್ಯಾಗ್ರಹ ಹಾಗೂ ಜಾಗರಣೆ ಹಮ್ಮಿಕೊಳ್ಳಲಾಗಿತ್ತು. ಅನಂತರ ಮಧ್ಯರಾತ್ರಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ ದಿನ ಆಚರಿಸಿದರು.

ಹೈಕೋರ್ಟ್‌ನಲ್ಲಿ ಧ್ವಜಾರೋಹಣ: 72 ನೆ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಕರ್ನಾಟಕ ಹೈಕೋರ್ಟ್ ಮುಂಭಾಗದ ಆವರಣದಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು.

ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ಹೈಕೋರ್ಟ್ ಸಿಬ್ಬಂದಿಗಳು ಕುಟುಂಬ ಸದಸ್ಯರೊಂದಿಗೆ ಭಾಗಿಯಾಗಿದ್ದರು. ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಲೋಕಾಯುಕ್ತ ಎನ್. ಆನಂದ್, ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಿಬಿಎಂಪಿ ಕಚೇರಿಯಲ್ಲಿ ಧ್ವಜಾರೋಹಣ: ಸ್ವಾತಂತ್ರೋತ್ಸವದ ಅಂಗವಾಗಿ ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಯರ್ ಸಂಪತ್‌ರಾಜ್ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್, ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News