ಮೂಲಭೂತ ಸ್ವಾತಂತ್ರ್ಯ ಕಸಿಯುತ್ತಿರುವ ಕೇಂದ್ರ ಸರಕಾರ: ದಿನೇಶ್‌ ಗುಂಡೂರಾವ್

Update: 2018-08-15 14:43 GMT

ಬೆಂಗಳೂರು, ಆ.15: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರವು, ದೇಶದ ಜನಸಾಮಾನ್ಯರ ಮೂಲಭೂತ ಸ್ವಾತಂತ್ರವನ್ನು ಕಸಿಯುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ 72ನೆ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಗಳಿಂದಾಗಿ ಜನಸಾಮಾನ್ಯರ ಮೂಲಭೂತ ಸ್ವಾತಂತ್ರವೇ ಮರೀಚಿಕೆಯಾದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಅಲ್ಪಸಂಖ್ಯಾತರು, ದಲಿತರಲ್ಲಿ ಅಭದ್ರತೆ ಕಾಡುತ್ತಿದೆ. ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಅವರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ. ದೇಶವನ್ನು ಈ ಸರ್ವಾಧಿಕಾರಿ ಧೋರಣೆಯ ಆಡಳಿತದಿಂದ ರಕ್ಷಿಸಲು ನಾವು ಮತ್ತೊಮ್ಮೆ ತ್ಯಾಗ, ಹೋರಾಟ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.

ದೇಶದ 125 ಕೋಟಿ ಜನರಿಗೆ ಪ್ರಧಾನಿಯಾಗಬೇಕಾದವರು, ದುರಾದೃಷ್ಟವಶಾತ್ ಕೆಲವೇ ಕೆಲವು ಜನರಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ಸಂವಿಧಾನದ ನಿಯಮಗಳ ವಿರುದ್ಧವಾಗಿ ಈ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ. ಈವರೆಗೆ ದೇಶವನ್ನು ಕಾಂಗ್ರೆಸ್ ರಕ್ಷಿಸಿಕೊಂಡು ಬಂದಿದೆ ಎನ್ನುವುದನ್ನು ಜನತೆಗೆ ಮನದಟ್ಟು ಮಾಡಬೇಕಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಾ.ಎಂ.ವೀರಪ್ಪಮೊಯ್ಲಿ, ಮಾಜಿ ಸಚಿವರಾದ ರಾಣಿಸತೀಶ್, ರೋಷನ್‌ ಬೇಗ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News