ಮಹಾದಾಯಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯ: ಸಚಿವ ದೇಶಪಾಂಡೆ

Update: 2018-08-15 16:10 GMT

ಬೆಂಗಳೂರು, ಆ. 15: ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತು ನ್ಯಾಯಾಧಿಕರಣವು ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ

ಮಹಾದಾಯಿಯಿಂದ 36 ಟಿಎಂಸಿ ನೀರನ್ನು ಕರ್ನಾಟಕ ರಾಜ್ಯ ಕೇಳಿತ್ತು. ಆದರೆ, ನ್ಯಾಯಾಧಿಕರಣವು ನಮಗೀಗ ಕೇವಲ 13.42 ಟಿಎಂಸಿ ನೀರನ್ನು ಮಾತ್ರ ನೀಡಿದೆ. ಇದು ರಾಜ್ಯದ ಅಗತ್ಯಗಳಿಗೆ ಸಾಕಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರಕಾರವು ನ್ಯಾಯಾಧಿಕರಣದ ತೀರ್ಪನ್ನು ಸದ್ಯದಲ್ಲೇ ಕೂಲಂಕಷವಾಗಿ ಅಧ್ಯಯನ ಮಾಡಲಿದೆ. ಅನಂತರ, ಮಹಾದಾಯಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯವಾಗಿ ಸಿಗಬೇಕಾದ ಪಾಲನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಈ ವಿಷಯದಲ್ಲಿ ರಾಜ್ಯದ ಹಿತವನ್ನು ಕಾಪಾಡಲು ಸರಕಾರ ಬದ್ಧ ಎಂದು ಹೇಳಿದ್ದಾರೆ.

ಪರಿಹಾರಕ್ಕೆ ಕ್ರಮ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಅಪಾರ ಮಳೆಯಿಂದಾಗಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಉಂಟಾಗಿರುವ ಹಾನಿ ಅಥವಾ ಸಂಕಷ್ಟ ಪರಿಸ್ಥಿತಿಗೆ ತುರ್ತಾಗಿ ಸ್ಪಂದಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಾಣ, ಮನೆಹಾನಿ ಮತ್ತು ಜಾನುವಾರುಗಳ ಸಾವು ಸಂಭವಿಸಿದರೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲೂ ಹಣ ಇರುವಂತೆ ನೋಡಿಕೊಳ್ಳಲಾಗಿದೆ. ಸದ್ಯಕ್ಕೆ ರಾಜ್ಯದ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಈ ಬಾಬ್ತಿಗಾಗಿ 200 ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣವಿದೆ ಎಂದು ಹೇಳಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರಗಳಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ರಾಜ್ಯದ ಅಣೆಕಟ್ಟುಗಳು ಭರ್ತಿಯಾಗಿವೆ. ಎಲ್ಲ ಅಣೆಕಟ್ಟುಗಳಿಂದಲೂ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ನದಿ ತೀರದ ಜನ ಮುಂಜಾಗ್ರತೆ ವಹಿಸಬೇಕು. ಮಲೆನಾಡಿನಲ್ಲೂ ಸತತವಾಗಿ ಮಳೆಯಿಂದ ಜನರಿಗೆ ತೊಂದರೆಯಾಗಿದೆ. ಸರಕಾರವು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅಗತ್ಯ ನೆರವು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News