ಹಸಿರು ಕರ್ನಾಟಕ ನಿರ್ಮಾಣಕ್ಕೆ ಕೈ ಜೋಡಿಸಿ: ಶಾಸಕ ಬಿ.ಎ.ಬಸವರಾಜ

Update: 2018-08-15 16:19 GMT

ಬೆಂಗಳೂರು, ಆ.15: ನಗರೀಕರಣ ಬೆಳೆದಂತೆಲ್ಲ ಎಲ್ಲ ಪ್ರದೇಶಗಳು ಕಾಂಕ್ರೀಟ್ ಮಯವಾಗುತ್ತಿವೆ. ಪ್ರತಿಯೊಬ್ಬರೂ ಮನೆಗೊಂದು ಸಸಿ ನೆಡುವ ಮೂಲಕ ಹಸಿರು ಕರ್ನಾಟಕ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಶಾಸಕ ಬಿ.ಎ.ಬಸವರಾಜ ಕರೆ ನೀಡಿದರು.

ಬುಧವಾರ ಕೆ.ಆರ್.ಪುರದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಬೆಂಗಳೂರು ಪೂರ್ವ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 72ನೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

‘ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು’ ಎಂಬ ಘೋಷವಾಕ್ಯದಡಿಯಲ್ಲಿ ನಾವೆಲ್ಲ ಸೇರಿ ಹಸಿರು ಕರ್ನಾಟಕದ ಕನಸನ್ನು ಸಾಕಾರಗೊಳಿಸಬೇಕಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕಿದೆ ಎಂದು ಅವರು ಹೇಳಿದರು.

ರಾಜೀವ್‌ಗಾಂಧಿ ಕ್ರೀಡಾಂಗಣದ ಶಾಶ್ವತ ವೇದಿಕೆ ಹಾಗೂ ಪ್ರೇಕ್ಷಕರ ಗ್ಯಾಲರಿಯನ್ನು 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ತಾಲೂಕಿನ ಜನ ಪಡೆದುಕೊಳ್ಳಬೇಕು ಎಂದು ಬಸವರಾಜ ತಿಳಿಸಿದರು.

ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿದ್ದ ದೇಶವನ್ನು ಸ್ವತಂತ್ರಗೊಳಿಸಲು ಹೋರಾಡಿದ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ಪ್ರತಿನಿತ್ಯ ನಾವು ಸ್ಮರಿಸಬೇಕು. ಗುರು ಹಿರಿಯರನ್ನು ಗೌರವಿಸುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿವೃಂದಕ್ಕೆ ಅವರು ಕರೆ ನೀಡಿದರು.

ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ರಾಮಲಕ್ಷ್ಮಣ್ ಮಾತನಾಡಿ, ವಿಶ್ವದಲ್ಲೆ ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ನಮ್ಮ ದೇಶವು ಮುಂಚೂಣಿಯಲ್ಲಿದೆ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ನಮ್ಮ ಯುವ ಸಮೂಹ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News