ಬಂಡವಾಳಶಾಹಿಗಳ ಹಿಡಿತದಲ್ಲಿ ಕೇಂದ್ರ ಸರಕಾರ: ನ್ಯಾ.ಗೋಪಾಲಗೌಡ

Update: 2018-08-15 16:21 GMT

ಬೆಂಗಳೂರು, ಆ.15: ಬಂಡವಾಳ ಶಾಹಿಗಳ ಕೈಯಲ್ಲಿ ಕೇಂದ್ರ ಸರಕಾರ ನಲುಗುತ್ತಿದ್ದು, ಕಾರ್ಮಿಕ ವಿರೋಧಿ ಧೋರಣೆ ನಿಲುವು ತಾಳುತ್ತಿದೆ ಎಂದು ನಿವೃತ್ತ ನ್ಯಾ.ಗೋಪಾಲಗೌಡ ತಿಳಿಸಿದರು.

ಸಿಐಟಿಯು ನಗರದ ಪುರಭವನದ ಮುಂಭಾಗ ಸ್ವಾತಂತ್ರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಹೋರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎನ್.ವಿ.ಕೃಷ್ಣಮಾಚಾರ್‌ಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ಬಂದು 7ದಶಕ ಕಳೆದಿದ್ದರೂ ಸಮಸ್ಯೆಗಳಿಂದ ಮುಕ್ತಗೊಂಡಿಲ್ಲ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಧೋರಣೆ ಹೊಂದಿದೆ. ಕಾರ್ಮಿಕ ಹಕ್ಕುಗಳ ಪರವಾಗಿದ್ದ ಕಾನೂನನ್ನು ಕಿತ್ತುಕೊಂಡು ಕೇಂದ್ರ ಸರಕಾರ ತನ್ನ ಹಿಡಿತಕ್ಕೆ ಪಡೆಯುತ್ತಿದೆ. ಕೇವಲ ಕಾರ್ಮಿಕ ವಿರೋಧಿ ಮಾತ್ರವಲ್ಲ, ರೈತ, ಯುವಕ, ದಲಿತ, ಅಲ್ಪಸಂಖ್ಯಾತ, ಹೆಣ್ಣುಮಕ್ಕಳ ವಿರೋಧಿ ಆಗಿದೆ ಎಂದು ಅವರು ಕಿಡಿ ಕಾರಿದರು.

ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಹಲವು ಪ್ರಾಂತ್ಯ ಹಾಗೂ ಭಾಷೆಗಳು ಸೇರಿ ಅಖಂಡವಾಗಿರುವ ಭಾರತವನ್ನು ಒಡೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ದೇಶದ ಜನತೆ ಸದಾ ಎಚ್ಚರದ ಸ್ಥಿತಿಯಲ್ಲಿದ್ದು, ದೇಶವನ್ನು ಕಟ್ಟುವಂತಹ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ನಮ್ಮ ಹಕ್ಕು, ದೇಶ, ಭಾಷೆ ನಮ್ಮದು ಎಂಬ ಭಾವನೆಯನ್ನು ಬೆಳೆಸಿಕೊಂಡರೆ ಸಾಕು. ನಾವು ಯಾರನ್ನು ಸೋಲಿಸಬೇಕೆಂದಲ್ಲ, ಬದಲಾಗಿ ಯಾರನ್ನು ಗೆಲ್ಲಿಸಬೇಕೆಂದು ಯೋಚಿಸಬೇಕಿದೆ. ಇಲ್ಲಿ ನೆರೆದಿರುವ ದೇಶ ಭಕ್ತರು, ಶ್ರಮಜೀವಿಗಳು, ಕಾರ್ಮಿಕರು, ಕಾಯಕ ಜೀವಿಗಳು ಭಾರತ ದೇಶವನ್ನು ಗೆಲ್ಲಿಸಬಲ್ಲಿರಿ ಎಂದು ಅವರು ಆಶಿಸಿದರು.

ಲೇಖಕಿ ಸಂಧ್ಯಾ ರೆಡ್ಡಿ ಮಾತನಾಡಿ, ನಾವು ರಾಜಕೀಯ ಸ್ವಾತಂತ್ರ ಮಾತ್ರ ಅನುಭವಿಸುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ ಅನುಭವಿಸುತ್ತಿಲ್ಲ. ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡಿದರೆ ಅದು ಕೂಗಾಟ. ಪುರುಷರು ಮಾತನಾಡಿದರೆ ಅದು ದೇಶಪ್ರೇಮ ಅನ್ನಿಸಿಕೊಳ್ಳುತ್ತದೆ. ಇಂದು ಸ್ವಾತಂತ್ರೋತ್ಸವದ ಅರಿವನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಹೇಮಲತಾ, ಸಿಪಿಎಂ ಮುಖಂಡ ಡಾ.ಸಿದ್ದನಗೌಡ ಪಾಟೀಲ್, ಸಂಗೀತ ನಿರ್ದೇಶಕ ವಿ.ಮನೋಹರ್, ಪಿಚ್ಚಣ್ಣ, ಡಾ. ಬಿ.ಆರ್.ಮಂಜುನಾಥ್, ಲೀಲಾ ಸಂಪಿಗೆ, ಡಾ. ಜಯಲಕ್ಷ್ಮಿ, ನಿರ್ದೇಶಕ ಬಿ.ಸುರೇಶ್, ಇಂದಿರಾ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News