ಅಭಿವೃದ್ಧಿ ವಂಚಿತವಾಗಲು ಯಾರು ಕಾರಣ?

Update: 2018-08-15 18:42 GMT

ಮಾನ್ಯರೇ,

 ಪ್ರತೀ ವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಹಾಗೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕವು ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ಬೇರೆ ಭಾಗಗಳಿಗಿಂತ ಹಿಂದೆ ಇದೆ ಎಂದು ಹಲವಾರು ವರ್ಷಗಳಿಂದ ಅಲ್ಲಿಂದ ಆಯ್ಕೆಯಾಗಿ ಅಧಿಕಾರವನ್ನು ಅನುಭವಿಸುತ್ತಲೇ ಬಂದಿರುವ ಹಿರಿಯ ರಾಜಕಾರಣಿಗಳು ಹೇಳುತ್ತಿದ್ದಾರೆ. ಈ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಿದ್ದಾರೆ 1952ರಿಂದ ನಡೆಯುತ್ತಿರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಉತ್ತರಕರ್ನಾಟಕದ ಭಾಗದಿಂದಲೂ ಶಾಸಕರು, ಸಂಸತ್ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗುತ್ತಲೇ ಬಂದಿದ್ದಾರೆ. ಅಲ್ಲಿಂದ ಇಲ್ಲಿಯ ತನಕ ಕ್ಷೇತ್ರದ ಪ್ರತಿನಿಧಿಗಳು ಒಂದಲ್ಲ ಒಂದು ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರೇ ಆಗಿದ್ದಾರೆ. ಮಂತ್ರಿ ಮಂಡಲಗಳಲ್ಲಿ ಇಲ್ಲಿಯ ತನಕ ಆ ಭಾಗದ ನೂರಾರು ಮಂದಿ ಮಂತ್ರಿಗಳಾಗಿದ್ದಾರೆ. ಕೆಲವರು ಮುಖ್ಯಮಂತ್ರಿಗಳೂ ಆಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಪುಟಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಎಲ್ಲ ಪ್ರತಿನಿಧಿಗಳಿಗೆ ನೀಡುವ ರೀತಿಯಲ್ಲಿಯೇ ಇವರಿಗೂ ಅನುದಾನವನ್ನು ಆಯಾ ಸರಕಾರಗಳಲ್ಲಿ ನೀಡಲಾಗಿದೆ. ಹೀಗಿದ್ದ ಮೇಲೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ಹೇಳುವ ಮೊದಲು ಆ ಭಾಗದ ಅಭಿವೃದ್ಧಿಗೆ ಅಧಿಕಾರದಲ್ಲಿದ್ದ ಮಂದಿ ಏನು ಮಾಡಿದ್ದಾರೆ, ಇವರ ಕೊಡುಗೆಗಳೇನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ.

ಉತ್ತರ ಕರ್ನಾಟಕ ಅಭಿವೃದ್ಧಿ ವಂಚನೆಗೆ ರಾಜ್ಯ ಸರಕಾರಗಳು ಮಾತ್ರ ಕಾರಣವಲ್ಲ ಅಥವಾ ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ಕೇವಲ ನಮ್ಮ ಸರಕಾರಗಳೇ ಮಾತ್ರ ಕಾರಣವಲ್ಲ. ಮೈಸೂರಿನ ಮಹಾರಾಜರು ಮತ್ತು ಇಲ್ಲಿನ ದಿವಾನರ ಶ್ರಮ, ದೂರದೃಷ್ಟಿತ್ವದ ಆಡಳಿತವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗಲು ಹೆಚ್ಚಿನ ಕಾರಣವಾಗಿರುತ್ತದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಆಡಳಿತ ನಡೆಸಿದಲ್ಲಿ ಸ್ವಾತಂತ್ರ್ಯಪೂರ್ವದ ಆಡಳಿತಾಧಿಕಾರಿಗಳು ಹೆಚ್ಚಿನ ಗಮನವನ್ನು ನೀಡದಿರುವುದು ಹಿಂದೆ ಉಳಿಯಲು ಕಾರಣವಾಗಿರುತ್ತದೆ. ಉತ್ತರ ಕರ್ನಾಟಕದ ನಾಯಕರು ಹಲವಾರು ದಶಕಗಳಿಂದ ಅಧಿಕಾರದಲ್ಲಿದ್ದರೂ ಅಭಿವೃದ್ಧಿಯ ಕಡೆಗೆ ಗಮನವನ್ನೇ ನೀಡದೆ ಕೇವಲ ಉತ್ತರ ಕರ್ನಾಟಕದ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದು ಉತ್ತರ ಕರ್ನಾಟಕ ಜನರ ನೆಪ ಮಾಡಿಕೊಂಡು ಸ್ಥಾನ ಗಿಟ್ಟಿಸುವುದರಲ್ಲೇ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ನಾಲ್ಕಾರು ಬಾರಿ ಸಚಿವರಾದವರಿಗೆ ತಮ್ಮ ಕ್ಷೇತ್ರಗಳಿಗೆ ಬೇಕಾದ ಶುದ್ಧ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ಶಾಲೆ, ಆಸ್ಪತ್ರೆ ಮುಂತಾದ ವಿಚಾರಗಳ ಬಗ್ಗೆ ಗಮನ ಕೊಟ್ಟು ಮಾದರಿ ಕ್ಷೇತ್ರವನ್ನಾಗಿ ರೂಪಿಸಿಕೊಳ್ಳಲು ಯಾವ ತೊಂದರೆಯೂ ಇರಲಿಲ್ಲ. ಅವರ ಆಸಕ್ತಿಯ ಕೊರತೆಯಿಂದಾಗಿಯೇ ಇವೆಲ್ಲವೂ ಸಾಧ್ಯವಾಗಿರುವುದಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹಾರಾಡುವ ಜನ ಅಧಿಕಾರದಲ್ಲಿದ್ದಾಗ ತಮ್ಮ ಊರಿನಲ್ಲಿ ವಾರದಲ್ಲಿ ಎಷ್ಟು ದಿನ ಇದ್ದರು ಎಂಬುದನ್ನು ಒಮ್ಮೆ ಕೇಳಿಕೊಳ್ಳಲಿ. ಉತ್ತರ ಕರ್ನಾಟಕದ ನಾಯಕರಿಗೆ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಂಗಲೆ ಬೇಕು, ಐಷಾರಾಮಿ ಜೀವನ ಬೇಕು. ಊರಿನ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಬೇಕು. ಚುನಾವಣೆ ಬಂದಾಗ ಮಾತ್ರ ಹಣಬಲ, ಜಾತಿಬಲದಿಂದ ಗೆಲ್ಲುವ ತಂತ್ರಗಾರಿಕೆಯನ್ನು ರೂಪಿಸಿಕೊಂಡು ಶಾಶ್ವತವಾಗಿ ಅಧಿಕಾರದಲ್ಲಿದ್ದಾರೆ. ಉತ್ತರ ಕರ್ನಾಟಕದ ಜನರ ವಿಚಾರದಲ್ಲಿ ಅಲ್ಲಿನ ರಾಜಕಾರಣಿಗಳು ನೀಡಿರುವ ಸೇವೆ ಅಷ್ಟಕ್ಕಷ್ಟೇ. ನಿಜಕ್ಕೂ ಆ ಭಾಗದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಪ್ರಾಮಾಣಿಕವಾದ ಕಾರ್ಯಸೂಚನೆ ಸಿದ್ಧಪಡಿಸಿಕೊಂಡು ಸರಕಾರಗಳ ಮುಂದಿಡಲಿ.

Similar News