ಜಯಂತಿ ಆಚರಣೆಗಳಿಂದ ದೇಶ ಹಾಳಾಗುತ್ತಿದೆ: ಹೈಕೋರ್ಟ್
ಬೆಂಗಳೂರು, ಆ.16: ಸರಕಾರಿ ಅಧಿಕಾರಿಗಳು ಮಾಡುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುತ್ತಿಲ್ಲ. ಇದರ ಮಧ್ಯೆಯೇ ಕೆಂಪೇಗೌಡ ಜಯಂತಿ ಸೇರಿ ಇನ್ನಿತರ ಜಯಂತಿಗಳನ್ನು ಆಚರಿಸುವ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಪರ್ಯಾಯ ವಾಣಿಜ್ಯ ಮಳಿಗೆಯೊಂದನ್ನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯೊಂದರ ವೇಳೆ ಹರಾಜಿನಲ್ಲಿ ಭಾಗವಹಿಸಿದ ವ್ಯಕ್ತಿಗೆ ಪರ್ಯಾಯ ವಾಣಿಜ್ಯ ಮಳಿಗೆಯನ್ನು ನೀಡಿ ಎಂದು ನ್ಯಾಯಪೀಠ ಆದೇಶಿಸಿದರೂ ನೀಡಿಲ್ಲ. ಬೆಂಗಳೂರು ದಕ್ಷಿಣ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತರಿಗೆ ಖುದ್ದು ಹಾಜರಾಗಲು ಸೂಚನೆ ನೀಡಿದ್ದರೂ ನ್ಯಾಯಪೀಠದ ಎದುರು ಹಾಜರಾಗಿಲ್ಲ. ಇದರ ಮಧ್ಯೆ ಕೆಂಪೇಗೌಡ ಜಯಂತಿ ಸೇರಿ ಇನ್ನಿತರ ಜಯಂತಿಗಳನ್ನು ಆಚರಿಸುವ ಮೂಲಕ ಅಧಿಕಾರಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿತು.
ಹರಾಜಿನಲ್ಲಿ ಭಾಗವಹಿಸಿ ವಾಣಿಜ್ಯ ಮಳಿಗೆಯನ್ನು ಪಡೆಯಲು ಯಶಸ್ವಿಯಾಗಿದ್ದ ವ್ಯಕ್ತಿಯು 2013ರಲ್ಲಿಯೇ 1 ಲಕ್ಷ 82 ಸಾವಿರ ರೂ.ಪಾವತಿಸಿದ್ದಾನೆ. ಆದರೆ, ಆತನಿಗೆ ಬಿಬಿಎಂಪಿಯು ಹಣವನ್ನು ವಾಪಸ್ ನೀಡಿಲ್ಲ. ಪರ್ಯಾಯ ಮಳಿಗೆಯನ್ನೂ ನೀಡಿಲ್ಲ ಎಂದು ಕಿಡಿಕಾರಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠವು ದಕ್ಷಿಣ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತರು ಪೀಠದ ಎದುರು ಏಕೆ ಹಾಜರಾಗಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಪತ್ರಿಕ್ರಿಯಿಸಿದ ಸರಕಾರಿ ಪರ ವಕೀಲರು ಕೆಂಪೇಗೌಡ ಜಯಂತಿ ಇರುವುದರಿಂದ ಪೀಠದ ಎದುರು ಹಾಜರಾಗಲು ಅವರಿಗೆ ಸಾಧ್ಯವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಜಯಂತಿಗಳನ್ನು ಆಚರಿಸುವ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಿೀರಿ ಎಂದು ಬೇಸರ ವ್ಯಕ್ತಪಡಿಸಿತು.