ಕೇರಳದಲ್ಲಿ ಭಾರೀ ಮಳೆ: ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆ

Update: 2018-08-17 05:58 GMT

ತಿರುವನಂತಪುರ, ಆ.17: ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಬಲಿಯಾದವರ ಸಂಖ್ಯೆ 156ಕ್ಕೆ ಏರಿದೆ. ಗುರುವಾರ 26 ಮಂದಿ ಮೃತಪಟ್ಟಿದ್ದಾರೆ. 

ಕೊಚ್ಚಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆ ನೀರು  ನಿಂತಿದ್ದು, ವಿಮಾನ ನಿಲ್ದಾಣವನ್ನು ಆ.26ರ ತನಕ ಮುಚ್ಚಲಾಗಿದೆ.  ಚೆಂಗನ್ನೂರು ಶ್ರೀ ಅಯ್ಯಪ್ಪ ಕಾಲೇಜು ಹಾಸ್ಟೆಲ್ ನಲ್ಲಿ 30 ಮಂದಿ ವಿದ್ಯಾರ್ಥಿನಿಯರು ಹೊರಬರಲಾರದೆ  ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ.

ನೆರೆಪೀಡಿತ ಪಟ್ಟಣಮ್ ತಿಟ್ಟಕ್ಕೆ ರಕ್ಷಣಾ ಕಾರ್ಯಾಚರಣೆಗೆ 10 ಬೋಟ್ ಗಳನ್ನು ರವಾನಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ನ 540 ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ತಿರುವನಂತಪುರ, ಎರ್ನಾಕುಳಂ, ಕೊಲ್ಲಮ್ ಮತ್ತು ಆಲಪ್ಪುಝ ಜಿಲ್ಲೆಗಳ  ಮೀನುಗಾರರು ಭಾಗಿಯಾಗಿದ್ದಾರೆ.  ಹಲವು ಜಿಲ್ಲೆಗಳಲ್ಲಿ  ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ.

ಚಾಲಕ್ಕುಡಿ, ಪೆರಿಯಾರ್ ನದಿ ದಂಡೆಯಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ  ಸ್ಥಳಗಳಿಗೆ ರವಾನಿಸಲಾಗುತ್ತದೆ.

ಮಂಜಾಲಿ , ಆಲುವಾ ಪಟ್ಟಣದಲ್ಲಿ ನೆರೆಯಿಂದ ಸಂತ್ರಸ್ತರಾಗಿರುವವರಿಗೆ  1,500 ಆಹಾರ ಪ್ಯಾಕೆಟ್ ಗಳನ್ನು ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ಪೂರೈಸಲಾಗಿದೆ. 7,500 ಪ್ಯಾಕೆಟ್ ಗಳನ್ನು ತಕ್ಷಣ ಪೂರೈಸಲಾಗುವುದು. ಸಂಜೆಯೊಳಗೆ 20,000 ಆಹಾರ ಪೊಟ್ಟಣಗಳು ತಲುಪಲಿದೆ ಎಂದು ಎರ್ನಾಕುಳಂ ಜಿಲ್ಲಾಡಳಿತ ತಿಳಿಸಿದೆ.

ಚೆಂಗನ್ನೂರು ಮತ್ತು ಪಟ್ಟಣಂತಿಟ್ಟದಲ್ಲಿ ನೆರೆ ನೀರಿನಿಂದಾಗಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.  ಮಧುರೈ ಕಾರ್ಪೊರೇಶನ್  ಕೇರಳಕ್ಕೆ 20ಲಕ್ಷ ರೂ.ವೆಚ್ಚದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ.

ಸಿಬಿಎಸ್ ಸಿ ಮತ್ತು  ಐಸಿಎಸ್ ಸಿ ಶಾಲೆಗಳಿಗೆ ಆ.27ರಿಂದ 29ರ ತನಕ ರಾಜ್ಯ ಸರಕಾರದ ನಿರ್ದೇಶನದಂತೆ ಓಣಂ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News