ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ತೆರಳುತ್ತಿದ್ದ ವೇಳೆ ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ

Update: 2018-08-17 14:09 GMT

ಹೊಸದಿಲ್ಲಿ, ಆ. 17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರ ಇರಿಸಲಾಗಿದ್ದ ಹೊಸದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲು ತೆರಳಿದ್ದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಸ್ವಾಮಿ ಅಗ್ನಿವೇಶ್ ಅವರು ಅಲ್ಲಿಂದ ಹೊರನಡೆದು ಪಾರಾಗಲು ಯತ್ನಿಸಿದಾಗೂ ಜನರ ಗುಂಪೊಂದು ಅವರು ಅಟ್ಟಿಸಿಕೊಂಡು ಬಂದೂ ದೂಡಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

 ವ್ಯಕ್ತಿಯೊಬ್ಬ ಅಗ್ನಿವೇಶ್ ಹಿಡಿದಿರುವುದು ಹಾಗೂ ಮಹಿಳೆಯೊಬ್ಬರು ತಮ್ಮ ಚಪ್ಪಲಿ ಎತ್ತುತ್ತಿರುವ ದೃಶ್ಯ ಕೂಡ ಇದರಲ್ಲಿ ದಾಖಲಾಗಿದೆ. ಅಟಲ್ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿ ಕೇಂದ್ರ ಕಚೇರಿಯತ್ತ ತೆರಳುತ್ತಿದ್ದಾಗ ತನ್ನ ಮೇಲೆ ದಾಳಿ ನಡೆದಿದೆ. ಸುಮಾರು 20ರಿಂದ 30 ಬಿಜೆಪಿ ಕಾರ್ಯಕರ್ತರು ಆಗಮಿಸಿದರು ಹಾಗೂ ನನ್ನನ್ನು ಸುತ್ತುವರಿದು ದೂಡಿದರು. ನನ್ನ ಮುಂಡಾಸು ಕೆಳಗೆ ಬಿತ್ತು. ಅವರು ತನ್ನನ್ನು ದೇಶದ್ರೋಹಿ ಎಂದು ಕರೆಯಲು ಆರಂಭಿಸಿದರು ಎಂದು ಅಗ್ನಿವೇಶ್ ಹೇಳಿದ್ದಾರೆ.

 ‘‘ಅವರು ನನ್ನನ್ನು ವಿಷ್ಣು ದಿಗಂಬರ ವೃತ್ತದತ್ತ ದೂಡಿದರು ಹಾಗೂ ನಿಂದಿಸಿದರು. ಕೆಲವು ಪೊಲೀಸರು ಅಲ್ಲಿ ನಿಂತಿದ್ದರು. ಆದರೂ ಕೆಲವು ಮಹಿಳೆಯರು ಸೇರಿದಂತೆ ಈ ಜನರು ನನಗೆ ಹೊಡೆಯಲು ಚಪ್ಪಲಿ ತೆಗೆದರು ಹಾಗೂ ನಿಂದಿಸಿದರು’’ ಎಂದು ಅಗ್ನಿವೇಶ್ ತಿಳಿಸಿದ್ದಾರೆ. ಈ ತಿಂಗಳಲ್ಲಿ ಸ್ವಾಮಿ ಅಗ್ನಿವೇಶ್ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಜುಲೈ 17ರಂದು ಜಾರ್ಖಂಡ್‌ನ ಪಾಕುರ್‌ನಲ್ಲಿ ಪಹಾರಿಯಾ ಬುಡಕಟ್ಟಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸ್ವಾಮಿ ಅಗ್ನಿವೇಶ್ ಮೇಲೆ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ದಾಳಿ ನಡೆಸಿದ್ದರು.

 ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿವೇಶ್, ‘‘ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ದಾಳಿ ನಡೆಸಲಾಗಿದೆ. ಆದರೆ, ನಾನು ಬಚಾವಾದೆ. ಅವರು ಯಾಕೆ ದಾಳಿ ಮಾಡಿದ್ದರೆ ಎಂದು ನನಗೆ ಈಗ ಕೂಡ ತಿಳಿದಿಲ್ಲ’’ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಅವರು ಪ್ರಶ್ನಿಸಿದ್ದಾರೆ ಹಾಗೂ ಪ್ರತಿಭಟನಕಾರರು ಸೇರಿದ ಹೊರತಾಗಿಯಾ ಘಟನೆ ನಡೆದ ಸ್ಥಳದ ಸಮೀಪ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News