ಇಂದಿನಿಂದ ಮೂರನೇ ಟೆಸ್ಟ್: ಭಾರತಕ್ಕೆ ಮಾಡು-ಮಡಿ ಪಂದ್ಯ

Update: 2018-08-17 18:31 GMT

ಟ್ರೆಂಟ್‌ಬ್ರಿಡ್ಜ್, ಆ.17: ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಭಾರತ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಶನಿವಾರ ಇಲ್ಲಿ ಆರಂಭವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಆಂಗ್ಲರು 3ನೇ ಪಂದ್ಯವನ್ನು ಜಯಿಸಿ ಸರಣಿ ಗೆದ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ, ಕೊಹ್ಲಿ ಪಡೆ ಸರಣಿಯಲ್ಲಿ ಸ್ಪರ್ಧೆಯಲ್ಲಿರಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮಳೆಬಾಧಿತ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 159 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲುಂಡಿತ್ತು. ಮೊದಲ ಟೆಸ್ಟ್‌ನಲ್ಲಿ 31 ರನ್‌ನಿಂದ ಪಂದ್ಯ ಕೈಚೆಲ್ಲಿತ್ತು. 2 ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಶಾಸ್ತ್ರಿ ಕಾರ್ಯವೈಖರಿಯ ಬಗ್ಗೆ ಟೀಕೆಗಳೂ ವ್ಯಕ್ತವಾಗಿದೆ.

ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌ನ್ನು ಮಣಿಸಬೇಕಾದರೆ ಭಾರತ ಭಾರೀ ಬೆವರಿಳಿಸಬೇಕಾಗಿದೆ. ಭಾರತದ ದಾಂಡಿಗರು ರನ್ ಬರ ಎದುರಿಸುತ್ತಿದ್ದಾರೆ. ಈ ತನಕ ಇನಿಂಗ್ಸ್ ಆರಂಭಿಸಿರುವ ಮೂವರು ದಾಂಡಿಗರಾದ ಶಿಖರ್ ಧವನ್, ಮುರಳಿ ವಿಜಯ್ ಹಾಗೂ ಕೆ.ಎಲ್. ರಾಹುಲ್ ಇಂಗ್ಲೆಂಡ್ ವೇಗದ ಬೌಲರ್‌ಗಳ ಸ್ವಿಂಗ್ ದಾಳಿಯನ್ನು ಎದುರಿಸಲಾಗದೇ ಪರದಾಟ ನಡೆಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಮಧ್ಯಮ ಕ್ರಮಾಂಕದ ದಾಂಡಿಗರೂ ರನ್ ಗಳಿಸಲು ಪರದಾಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರೂ ತಂಡವನ್ನು ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ. ಉಪ ನಾಯಕ ಅಜಿಂಕ್ಯ ರಹಾನೆ ಸೇರಿದಂತೆ ತಂಡದ ಯಾವ ಆಟಗಾರನೂ ಕೊಹ್ಲಿಗೆ ಸಮರ್ಥ ಸಾಥ್ ನೀಡುತ್ತಿಲ್ಲ.

20ರ ಹರೆಯದ ವಿಕೆಟ್‌ಕೀಪರ್-ದಾಂಡಿಗ ರಿಷಭ್ ಪಂತ್ ಕಳಪೆ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ಬದಲಿಗೆ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಕಾರ್ತಿಕ್ ನಾಲ್ಕು ಇನಿಂಗ್ಸ್‌ಗಳಲ್ಲಿ 0, 20,1,0 ರನ್ ಗಳಿಸಿದ್ದಾರೆ. ವಿಕೆಟ್‌ಕೀಪಿಂಗ್‌ನಲ್ಲೂ ವಿಫಲರಾಗಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಸಿಡಿಸಿರುವ ಪಂತ್ ಚೊಚ್ಚಲ ಟೆಸ್ಟ್ ಪಂದ್ಯ ಆಡಲು ಎದುರು ನೋಡುತ್ತಿದ್ದಾರೆ. ‘‘ನಮ್ಮ ತಂಡದ ದಾಂಡಿಗರು ಮೂರನೇ ಟೆಸ್ಟ್‌ನಲ್ಲಿ ಶಿಸ್ತುಬದ್ಧ ಹಾಗೂ ಸಹನೆಯಿಂದ ಬ್ಯಾಟಿಂಗ್ ಮಾಡುವ ಅವಶ್ಯಕತೆಯಿದೆ. ತಂಡ ಚೆನ್ನಾಗಿ ಆಡುತ್ತಿಲ್ಲ. ಸರಣಿಯಲ್ಲಿ ಮರು ಹೋರಾಟ ನೀಡಬೇಕಾದರೆ ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ’’ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಫಿಟ್ ಆಗಿರುವುದು ತಂಡಕ್ಕೆ ಸಿಹಿ ಸುದ್ದಿಯಾಗಿದೆ. ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡುವ ನಿರೀಕ್ಷೆಯಿದೆ.

ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಮುಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ವಿಕೆಟ್ ಕಬಳಿಸಿದ್ದರು. ಆದರೆ, ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆರ್.ಅಶ್ವಿನ್ ಹಾಗೂ ಹಾರ್ದಿಕ ಪಾಂಡ್ಯ ಕೈನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.ನಾಯಕ ಕೊಹ್ಲಿ ಕೂಡ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ.

ಇದೇ ವೇಳೆ, ಇಂಗ್ಲೆಂಡ್ ಪಾಳಯಕ್ಕೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಂತಿಮ-11ರ ಬಳಗಕ್ಕೆ ವಾಪಸಾಗಿದ್ದಾರೆ. ಕಳೆದ ವರ್ಷ ನಡೆದ ನೈಟ್‌ಕ್ಲಬ್ ಘಟನೆಗೆ ಸಂಬಂಧಿಸಿ ಮಂಗಳವಾರ ಬ್ರಿಸ್ಟೋಲ್ ಕ್ರೌನ್ ಕೋರ್ಟ್‌ನಿಂದ ದೋಷಮುಕ್ತರಾಗಿರುವ ಸ್ಟೋಕ್ಸ್ ಅವರು ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಬದಲಿಗೆ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ.

ಕರನ್ ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದ ಕರನ್ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News