'ಆ್ಯಪಲ್' ನೆಟ್‍ವರ್ಕ್ ಹ್ಯಾಕ್ ಮಾಡಿದ ಬಾಲಕ !

Update: 2018-08-18 11:02 GMT

ಸಿಡ್ನಿ, ಆ.18:  ಆಸ್ಟ್ರೇಲಿಯಾದ ಹದಿಹರೆಯದ ಬಾಲಕ ಆ್ಯಪಲ್‍ನ ಮುಖ್ಯ ಕಂಪ್ಯೂಟರ್ ನೆಟ್‍ವರ್ಕ್ ಹ್ಯಾಕ್ ಮಾಡಿ ಆಂತರಿಕ ಕಡತಗಳನ್ನು ಡೌನ್‍ಲೋಡ್ ಮಾಡಿ, ಗ್ರಾಹಕರ ಖಾತೆಗಳಿಗೂ ಕನ್ನ ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ  ಆ್ಯಪಲ್ ಇನ್‍ ಕಾರ್ಪೊರೇಷನ್ ಸ್ಪಷ್ಟನೆ ನೀಡಿ, "ಗ್ರಾಹಕರ ಡಾಟಾ ಸುಭದ್ರವಾಗಿದೆ. ಇದಕ್ಕೆ ಯಾವ ತೊಂದರೆಯೂ ಆಗಿಲ್ಲ" ಎಂದು ಹೇಳಿಕೊಂಡಿದೆ.

ಮೆಲ್ಬೋರ್ನ್‍ನ 16ರ ಬಾಲಕ ಅಮೆರಿಕದ ಕಂಪ್ಯೂಟರ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಆ್ಯಪಲ್‍ನ ಮುಖ್ಯಫ್ರೇಮ್‍ಗೆ ತನ್ನ ಮನೆಯಿಂದಲೇ ಹಲವು ಬಾರಿ ಕನ್ನ ಹಾಕಿದ್ದಾನೆ ಎಂದು ದ ಏಜ್ ವರದಿ ಮಾಡಿತ್ತು. ಹದಿಹರೆಯದ ಬಾಲಕನ ವಕೀಲ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯನ್ನು ಆಧರಿಸಿ ಈ ವರದಿ ಪ್ರಕಟಿಸಲಾಗಿತ್ತು.

ಈ ಬಾಲ ಹ್ಯಾಕರ್ 90 ಗಿಗಾಬೈಟ್‍ನಷ್ಟು ಸೋರ್ಸ್ ಫೈಲ್‍ಗಳನ್ನು ಡೌನ್‍ಲೋಡ್ ಮಾಡಿಕೊಂಡು, ಗ್ರಾಹಕರ ಖಾತೆಗಳನ್ನು ವೀಕ್ಷಿಸಿದ್ದಾನೆ ಎಂದು ವರದಿ ಹೇಳಿತ್ತು. ಆದರೆ ಬಾಲಕನ ಗುರುತು ಬಹಿರಂಗಡಿಸಿರಲಿಲ್ಲ.

ಈ ದಾಳಿ ಗೊತ್ತಾದ ಬಳಿಕ ಆ್ಯಪಲ್, ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ಸಂಸ್ಥೆಯ ಮೊರೆ ಹೋಗಿತ್ತು. ಈ ಪ್ರಕರಣವನ್ನು ಎಫ್‍ಬಿಐ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರಿಗೆ ಒಪ್ಪಿಸಿತ್ತು ಎಂದು ಪತ್ರಿಕೆ ವಿವರಿಸಿದೆ. ಎಎಫ್‍ಪಿ ಬಾಲಕನ ಮನೆಯ ಮೇಲೆ ದಾಳಿ ಮಾಡಿದಾಗ ಎರಡು ಲ್ಯಾಪ್‍ಟಾಪ್, ಒಂದು ಮೊಬೈಲ್ ಫೋನ್ ಮತ್ತು ಹಾರ್ಡ್‍ಡ್ರೈವ್‍ಗಳನ್ನು ಪೊಲೀಸರಿಗೆ ನೀಡಲಾಗಿದೆ. ಇದನ್ನು ಪರಿಶೀಲಿಸಿದಾಗ ದಾಳಿ ನಡೆದಿರುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ.

‘ಹ್ಯಾಕಿ ಹ್ಯಾಕ್ ಹ್ಯಾಕ್’ ಎಂಬ ಫೋಲ್ಡರ್‍ನಲ್ಲಿ ಸೂಕ್ಷ್ಮ ದಾಖಲೆಗಳನ್ನು ಸೇವ್ ಮಾಡಿಡಲಾಗಿತ್ತು. ಕಂಪನಿಯ ಮಾಹಿತಿ ಭದ್ರತಾ ಅಧಿಕಾರಿ, ಈ ದಾಳಿಯನ್ನು ಪತ್ತೆ ಮಾಡಿದ್ದಾರೆ. ಬಳಿಕ ಕಾನೂನು ಜಾರಿ ಸಂಸ್ಥೆಗೆ ಪ್ರಕರಣವನ್ನು ಒಪ್ಪಿಸಲಾಗಿದೆ ಎಂದು ಆ್ಯಪಲ್ ವಕ್ತಾರರು ಹೇಳಿದ್ದಾರೆ. ಆರೋಪಿ ಬಾಲಾಪರಾಧಿಯಾಗಿರುವುದರಿಂದ ಆತನ ಹೆಸರು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News