ಪ್ರಧಾನಿಯಾಗಿ ಪ್ರಮಾಣವಚನ ವೇಳೆ ತಡವರಿಸಿದ ಇಮ್ರಾನ್

Update: 2018-08-18 12:00 GMT

ಇಸ್ಲಾಮಾಬಾದ್, ಆ. 18: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಇಂದು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಅಧಿಕಾರಕ್ಕೇರಿದರೂ ಪ್ರಮಾಣವಚನ ಸ್ವೀಕಾರದ ವೇಳೆ ಕೆಲವೊಂದು ಎಡವಟ್ಟುಗಳನ್ನು ಮಾಡಿದರು.

ಕನ್ನಡಕ ಧರಿಸಿದ್ದ ಇಮ್ರಾನ್ ರೋಜ್-ಇ- ಖಯಾಮತ್ (ತೀರ್ಪಿನ ದಿನ) ಎಂದು ಹೇಳುವ ಬದಲು ‘ರೋರ್ -ಇ- ಖಯಾಮತ್ (ನಾಯಕತ್ವದ ದಿನ) ಎಂದು ಹೇಳಿಬಿಟ್ಟರು. ಅಧ್ಯಕ್ಷ ಮಮ್ನೂನ್ ಹುಸೈನ್ ಅವರು ಇಮ್ರಾನ್ ಗೆ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಬೋಧಿಸಿದರು. ಇಮ್ರಾನ್ ತಪ್ಪಾಗಿ ಉಚ್ಛರಿಸಿದ್ದಾರೆಂದು ತಿಳಿಯುತ್ತಲೇ ಅವರನ್ನು ಹುಸೈನ್ ತಿದ್ದಿದಾಗ ನಕ್ಕ ಇಮ್ರಾನ್ ಸರಿಯಾದ ಪದವನ್ನು ಮತ್ತೆ ಉಚ್ಛರಿಸಿದರು.

ಪ್ರಮಾಣವಚನ ಸ್ವೀಕಾರದ ಸಂದರ್ಭ ಕೆಲವೊಂದು ಉರ್ದು ಪದಗಳನ್ನು ಉಚ್ಛರಿಸಲೂ ಇಮ್ರಾನ್ ತಡವರಿಸಿದ್ದು ಕಂಡು ಬಂತು. ಅಷ್ಟೇ ಅಲ್ಲದೆ ಪಾಕಿಸ್ತಾನದ ಕಾಲಮಾನ 10 ಗಂಟೆಗೆ ಅಧ್ಯಕ್ಷರ ನಿವಾಸ ಐವಾನ್-ಇ-ಸದರ್ ಇಲ್ಲಿ ನಡೆಯಬೇಕಿದ್ದ ಪ್ರಮಾಣ ವಚನ ಸಮಾರಂಭಕ್ಕೂ ಇಮ್ರಾನ್ ತಡವಾಗಿ ಆಗಮಿಸಿದ್ದರು ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ಭಾರತೀಯ ಕ್ರಿಕೆಟಿಗ ಈಗ ಪಂಜಾಬ್ ಸಚಿವರಾಗಿರುವ ನವಜೋತ್ ಸಿಂಗ್ ಸಿದ್ಧು ಪ್ರಥಮ ಸಾಲಿನಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಶಿ ಹಾಗೂ ಖೈಬರ್ ಪಖ್ತುಂಖ್ವ ಇಲ್ಲಿನ ಮಾಜಿ ಮುಖ್ಯಮಂತ್ರಿ ಪರ್ವೇಝ್ ಖತ್ತಕ್ ಜತೆ ಆಸೀನರಾಗಿದ್ದರು, ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ ಖಾನ್ ಕೂಡ ಅವರ ಜತೆಗಿದ್ದರು.

ಇಮ್ರಾನ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದು ಹೊರತಾಗಿ ಕಪಿಲ್ ದೇವ್ ಮತ್ತು ಸುನಿಲ್ ಗಾವಸ್ಕರ್ ಅವರಿಗೆ ಆಹ್ವಾನವಿತ್ತಾದರೂ ಅವರಿಬ್ಬರೂ ಸಮಾರಂಭಕ್ಕೆ ಆಗಮಿಸಲು ಸಾಧ್ಯವಿಲ್ಲವೆಂದು ಹೇಳಿದ್ದರು. ಸಮಾರಂಭದಲ್ಲಿ ಸಿದ್ದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವ ಅವರನ್ನು ಆಲಂಗಿಸುತ್ತಿರುವುದೂ ಕಂಡು ಬಂತು.

ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಮನೇಕಾ ಪ್ರಥಮ ಸಾಲಿನಲ್ಲಿ ಕುಳಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News