ಪತ್ರಿಕಾಧರ್ಮ ಮರೆತ ಮಾಧ್ಯಮಗಳಿಂದು ಅನಗತ್ಯ ಸುದ್ದಿಗೆ ಒತ್ತು ಕೊಡುತ್ತಿವೆ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2018-08-18 18:52 GMT

ಬೆಂಗಳೂರು, ಆ.18: ಹಗರಣಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಮಾಧ್ಯಮಗಳಿಂದು ಅನಗತ್ಯವಾದ ಸುದ್ದಿಗಳನ್ನು ಬಿತ್ತರ ಮಾಡುವುದರಲ್ಲಿ ಸಕ್ರಿಯವಾಗಿ, ತಮ್ಮ ಪತ್ರಿಕಾ ಧರ್ಮವನ್ನು ಮರೆತು ಕೆಲಸ ಮಾಡುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ 71ನೆ ರಾಷ್ಟ್ರೀಯ ಮಂಡಳಿ ಸಭೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಗರಣಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಮಾಧ್ಯಮಗಳಿಂದು ಅನಗತ್ಯವಾದ ಸುದ್ದಿಗಳನ್ನು ಬಿತ್ತರ ಮಾಡುವುದರಲ್ಲಿ ಸಕ್ರಿಯವಾಗಿ, ತಮ್ಮ ಪತ್ರಿಕಾ ಧರ್ಮವನ್ನು ಮರೆತು ಕೆಲಸ ಮಾಡುತ್ತಿದ್ದಾರೆ, ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ರಾಜಕಾರಣಗಳಿಂದಾಗಿ ಇಂದಿನ ದೇಶದ ಸ್ಥಿತಿ ಸಂಪೂರ್ಣ ಹಾಳಾಗುತ್ತಿದೆ. ದೇಶದ ರಾಜಕೀಯ ಸ್ಥಿತಿ ಸಂಪೂರ್ಣ ಮಲಿನಗೊಂಡಿದೆ. ರಾಜಕಾರಣಕ್ಕೋಸ್ಕರ ಪಕ್ಷ, ಜಾತಿ, ಧರ್ಮಗಳನ್ನು ವಿಂಗಡಿಸಿ ಆಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ಅತ್ಯಂತ ಕೀಳು ಮಟ್ಟದ ರಾಜಕಾರಣ ಮಾಡಬಾರದು, ಮೊದಲು ಮನುಷ್ಯತ್ವವನ್ನು ರೂಪಿಸಿಕೊಳ್ಳಬೇಕು. ಎಲ್ಲರನ್ನು ಮನುಷ್ಯರನ್ನಾಗಿ ಕಾಣಬೇಕು ಎಂದು ಅವರು ತಿಳಿಸಿದರು.

ದೇಶದಲ್ಲಿ ಇನ್ನೂ ಶೇ.20 ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ, ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರಿಗೂ ಸಮಾನವಾದ ಶಿಕ್ಷಣ ಸಿಗಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಗುರೂಜಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ಅವರು ಬಹುತೇಕ ನಿಶಬ್ದವಾಗಿ, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಸಾಗುತ್ತಿದ್ದಾರೆ. ಆದರೆ, ಮಾಧ್ಯಮಗಳು ಅನಗತ್ಯವಾಗಿ ಇಲ್ಲಸಲ್ಲದ್ದನ್ನು ಬಿತ್ತರಿಸುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಅದರ ಬದಲಿಗೆ ಸಕಾರಾತ್ಮಕ ಅಂಶಗಳನ್ನು ಬಿತ್ತರಿಸಿ, ನಕಾರಾತ್ಮಕ ಅಂಶಗಳನ್ನು ಅಳಿಸಿ ಹಾಕಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ದೇಶ-ವಿದೇಶಗಳಿಂದ ಪತ್ರಕರ್ತರು ಹಾಜರಿದ್ದರು.

ದೃಶ್ಯ ಮಾಧ್ಯಮಗಳಿಂದ ಸಮಾಜದ ಸ್ವಾಸ್ಥ ಕೆಡುತ್ತಿದೆ. ದಿನಪೂರ್ತಿ ನಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸುವಲ್ಲಿ ತಲ್ಲೀನರಾಗಿರುತ್ತವೆ. ಪತ್ರಕರ್ತರು ತಮ್ಮ ಜವಾಬ್ದಾರಿ ಮರೆಯಬಾರದು.

-ರವಿಶಂಕರ್ ಗುರೂಜಿ, ಆರ್ಟ್ ಆಫ್ ಲೀವಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News