ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಗಳ ಮಾಹಿತಿ ಕೇಂದ್ರಕ್ಕೆ ಸಚಿವೆ ಜಯಮಾಲಾ ಚಾಲನೆ

Update: 2018-08-18 14:53 GMT

ಬೆಂಗಳೂರು, ಆ.18: ಕಲಾವಿದರು ಹಾಗೂ ಸಾರ್ವಜನಿಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಲು ಅನುಕೂಲವಾಗುವಂತೆ ಇಲಾಖೆಯ ಕಚೇರಿಯಲ್ಲಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಸಚಿವೆ ಜಯಮಾಲಾ ತಿಳಿಸಿದರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ವಿವಿಧ ಮೂಲೆಗಳಿಂದ ಕಲಾವಿದರು ಹಾಗೂ ಸಾರ್ವಜನಿಕರು ಇಲಾಖೆಗೆ ಬರುತ್ತಾರೆ. ಆದರೆ, ಇಲ್ಲಿ ಯಾರನ್ನು ಕೇಳಬೇಕೆಂಬ ಮಾಹಿತಿ ಇಲ್ಲದೆ ಗೊಂದಲಕ್ಕೆ ಒಳಗಾಗುತ್ತಾರೆ. ಹೀಗಾಗಿ ಇಂತಹವರ ನೆರವಿಗಾಗಿಯೆ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಮಾಹಿತಿ ಕೇಂದ್ರದಲ್ಲಿ ಕಲಾವಿದರಿಗೆ ಅರ್ಜಿಯನ್ನು ಬರೆದುಕೊಡುವುದರ ಜೊತೆಗೆ, ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವುದು ಹಾಗೂ ಇಲಾಖೆ, ಅಕಾಡೆಮಿಗಳಲ್ಲಿರುವ ಸೌಲಭ್ಯಗಳು, ಅದನ್ನು ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುವಂತಹ ಮಹತ್ವದ ಕಾರ್ಯವನ್ನು ನಿರ್ವಹಿಸಲಿದೆ. ಹೀಗಾಗಿ ಕಲಾವಿದರು ಯಾವುದೆ ಆತಂಕವಿಲ್ಲದೆ ಇಲಾಖೆಗೆ ಬಂದು ಸೌಲಭ್ಯಗಳನ್ನು ಪಡೆಯಬೇಕು ಎಂದು ಅವರು ಹೇಳಿದರು.

1.5 ಲಕ್ಷ ಪುಸ್ತಕಗಳು ಗ್ರಂಥಾಲಯಗಳಿಗೆ ರವಾನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಸೇರಿದಂತೆ ವಿವಿಧ ಅಕಾಡೆಮಿಗಳು ಪ್ರಕಟಿಸಿರುವ ಪುಸ್ತಕಗಳನ್ನು ರಾಜ್ಯದ ಜಿಲ್ಲಾ ವ್ಯಾಪ್ತಿಯ ಗ್ರಂಥಾಲಯಗಳಿಗೆ ಉಚಿತವಾಗಿ ತಲುಪಿಸುವಂತಹ ಕಾರ್ಯಕ್ಕೆ ಸಚಿವೆ ಜಯಮಾಲಾ ಚಾಲನೆ ನೀಡಿದರು.

ಇಲಾಖೆಯಡಿ ಪ್ರಕಟಗೊಳ್ಳುವ ಪುಸ್ತಕಗಳು ವೌಲ್ಯಯುತವಾಗಿರುತ್ತವೆ. ಈ ಪುಸ್ತಕಗಳು ರಾಜ್ಯದ ಎಲ್ಲ ಪ್ರದೇಶದ ಜನತೆಗೆ ತಲುಪುವಂತಾಗಬೇಕು. ಹೀಗಾಗಿ ಇಲಾಖೆಯಲ್ಲಿ ಮಾರಾಟವಾಗದೆ ಉಳಿದಿರುವ 1.5ಲಕ್ಷ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಎಷ್ಟು ಪುಸ್ತಕ: ಕನ್ನಡ ಪುಸ್ತಕ ಪ್ರಾಧಿಕಾರದ-300 ಶೀರ್ಷಿಕೆ, 150 ಪ್ರತಿ ಸೇರಿದಂತೆ ಒಟ್ಟು 45 ಸಾವಿರ ಪುಸ್ತಕ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ- 150 ಶೀರ್ಷಿಕೆ, 200 ಪ್ರತಿ ಸೇರಿದಂತೆ ಒಟ್ಟು- 30 ಸಾವಿರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 30 ಸಾವಿರ ಪುಸ್ತಕ ಸೇರಿದಂತೆ ಒಟ್ಟು 1.5ಲಕ್ಷ ಪುಸ್ತಕಗಳನ್ನು ಗ್ರಂಥಾಲಯಕ್ಕೆ ರವಾನೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕುವೆಂಪು ಸಮಗ್ರ ಸಾಹಿತ್ಯವನ್ನು ದೇಶದ ಇತರೆ 9ಭಾಷೆಗಳಿಗೆ ಭಾಷಾಂತರ ಮಾಡಿದೆ. ಈ ಭಾಷಾಂತರ ಕೃತಿಗಳನ್ನು ಆಯಾ ರಾಜ್ಯದ ಗ್ರಂಥಾಲಯ ಇಲಾಖೆಗೆ ಉಚಿತವಾಗಿ ನೀಡುವಂತಹ ಕಾರ್ಯಕ್ರಮವನ್ನು ಶೀಘ್ರವಾಗಿ ಆಯೋಜಿಸಲಾಗುವುದು.

-ಎನ್.ಆರ್.ವಿಶುಕುಮಾರ್, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News