×
Ad

ಮಳೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಸಚಿವ ಡಿಕೆಶಿ ಮನವಿ

Update: 2018-08-18 21:00 IST

ಬೆಂಗಳೂರು, ಆ.18: ರಾಜ್ಯದ ಕೊಡಗು, ಮಲೆನಾಡು ಸೇರಿದಂತೆ ನೆರೆಯ ರಾಜ್ಯ ಕೇರಳದಲ್ಲಿಯೂ ಧಾರಾಕಾರ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಅಗತ್ಯ ನೆರವು ನೀಡುವಂತೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಡಗು ಹಾಗೂ ಮಂಗಳೂರು ಭಾಗದಲ್ಲಿ ಮಳೆಯಿಂದ ಹಲವಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಆಹಾರ, ಬಟ್ಟೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದರು.

ರಾಮನಗರ ಜಿಲ್ಲಾಡಳಿತದ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಾಸಕರ ಸಹಕಾರದೊಂದಿಗೆ ಬಟ್ಟೆ, ನೀರು, ಆಹಾರ ಮತ್ತಿತರ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಹೆಬ್ಬಗೋಡಿ, ಪೀಣ್ಯ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಭಾಗಗಳಲ್ಲಿ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈಗಾಗಲೆ ಕೈಗಾರಿಕೋದ್ಯಮಿಗಳಿಗೆ ಎಸ್‌ಎಂಎಸ್, ವಾಟ್ಸ್ ಆ್ಯಪ್, ಇ-ಮೇಲ್ ಮೂಲಕ ಅಗತ್ಯ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಲ್ಲಿ ಮಾರಾಟವಾಗದೆ ಉಳಿದಿರುವ ಬಟ್ಟೆಗಳನ್ನು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸುವಂತೆ ಮನವಿ ಮಾಡಲಾಗಿದೆ. ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಬಹುದು. ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ನೆರವು ನೀಡುವಂತೆ ಆದೇಶಿಸಿದ್ದೇವೆ. ನೀರಾವರಿ ಇಲಾಖೆಯ ಗುತ್ತಿಗೆದಾರರ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ರಸ್ತೆ ತೆರವು ಮಾಡಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ನೆರೆ ಸಂತ್ರಸ್ತರಿಗಾಗಿ ಸಾರ್ವಜನಿಕರು ದಾನವಾಗಿ ನೀಡಿರುವ ವಸ್ತುಗಳು ದುರುಪಯೋಗವಾಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಕಚೇರಿಯನ್ನು ಕೇಂದ್ರೀಕರಿಸಲಾಗಿದೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ.ಜೆ.ಶ್ರೀನಿವಾಸ್ ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ. ಅವರ ಮೊಬೈಲ್ ಸಂಖ್ಯೆ : 98459 70510, ಜಿಲ್ಲಾಧಿಕಾರಿ ಕಚೇರಿ ಸಂಖ್ಯೆ 080-2727377, ಸಚಿವರ ಆಪ್ತ ಸಹಾಯಕ 96060 06699ಗೆ ಸಂಪರ್ಕಿಸಬಹುದು ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಮಹಾದಾಯಿ ಜಲ ವಿವಾದ ಕುರಿತು ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೈದ್ಯರ ತಂಡ ರವಾನೆ

ಕರಾವಳಿ, ಮಲೆನಾಡು ಹಾಗೂ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ವೈದ್ಯರ 20 ತಂಡಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಕಳುಹಿಸಲಾಗಿದೆ. ಅಲ್ಲದೆ, ಪ್ರವಾಹ ಪರಿಹಾರ ನಿಧಿಗೆ ತಮ್ಮ ಒಂದು ದಿನದ ವೇತನ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿ ನಿರ್ಧರಿಸಿದ್ದಾರೆ.

ಅಣೆಕಟ್ಟುಗಳಲ್ಲಿ ಬಿರುಕು

ಕೆಆರ್‌ಎಸ್, ಕಬಿನಿ, ಹೇಮಾವತಿ, ತುಂಗಭದ್ರಾ ಭಾಗದ ಅಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ, ಅಣೆಕಟ್ಟುಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಕಂಡು ಬರುತ್ತಿವೆ. ಇದರಿಂದಾಗಿ, ಹೊರ ಹರಿವು ಹೆಚ್ಚಳ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಣೆಕಟ್ಟುಗಳ ಬಳಿ ಅಧಿಕಾರಿಗಳ ಗಸ್ತು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಸಾಧ್ಯವಿರುವೆಡೆ ಕಾಲುವೆಗಳನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಿ, ಕೆರೆಗಳನ್ನು ತುಂಬಿಸಲು ನಿರ್ದೇಶನ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News