ಅನಿವಾಸಿ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಹೆಚ್ಚಿಸಲು ಮನವಿ

Update: 2018-08-18 15:36 GMT

ಬೆಂಗಳೂರು, ಆ.18: ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರಿಗೆ ರಾಜ್ಯ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಕನಿಷ್ಠ ಮೂರರಿಂದ ಐದು ಜನರಿಗೆ ನೀಡುವಂತೆ ಅರಬ್ ಸಂಯುಕ್ತ ಸಂಸ್ಥಾನದ ‘ಕನ್ನಡಿಗರು ದುಬಾಯಿ’ ಸಂಘಟನೆಯ ಪದಾಧಿಕಾರಿಗಳು ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಶನಿವಾರ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್ ನೇತೃತ್ವದ ನಿಯೋಗವು ಈ ಮನವಿ ಸಲ್ಲಿಸಿತು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ನೆಲೆಸಿದ್ದು, ಉದ್ಯೋಗಿಗಳಾಗಿ, ಉದ್ಯಮಿಗಳಾಗಿ, ಲೇಖಕರಾಗಿ, ಸಾಹಿತಿ, ಕಲಾವಿದರಾಗಿ ಕನ್ನಡ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ರಾಜ್ಯ ಸರಕಾರ ಪ್ರತಿ ವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಒಬ್ಬ ಅನಿವಾಸಿ ಕನ್ನಡಿಗರಿಗೆ ನೀಡಲಾಗುತ್ತಿದೆ. ಅದನ್ನು ಕನಿಷ್ಠ ಮೂರರಿಂದ ಐದು ಜನರಿಗೆ ನೀಡಬೇಕು ಎಂದು ನಿಯೋಗವು ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಕನ್ನಡಿಗರು ದುಬಾಯಿ ಸಂಘಟನೆಯ ಅಧ್ಯಕ್ಷ ಸದನ್‌ ದಾಸ್, ಪೂರ್ವ ಅಧ್ಯಕ್ಷರಾದ ವೀರೇಂದ್ರಬಾಬು, ಉಮಾವಿದ್ಯಾಧರ್, ಮಲ್ಲಿಕಾರ್ಜುನ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News