ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕಿದೆ: ಮುಹಮ್ಮದ್ ಇಕ್ಬಾಲ್ ಹೊತ್ತುರ್

Update: 2018-08-18 15:40 GMT

ಬೆಂಗಳೂರು, ಆ.18: ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಯಲ್ಲಿ ಮಾನವೀಯತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಸಲ್ ಸಬೀಲ್ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಹೊತ್ತುರ್ ಕರೆ ನೀಡಿದ್ದಾರೆ.

ಇತ್ತೀಚೆಗೆ ಇಂದಿರಾನಗರದ ಮಸ್ಜಿದ್-ಇ-ಉಮ್ಮುಲ್ ಹಸ್ನೈನ್ ಆವರಣದಲ್ಲಿ ಸಿಲಿಕಾನ್‌ಸಿಟಿ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಲಾಗಿದ್ದ 72ನೆ ಸ್ವಾತಂತ್ರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿಯಿಂದಾಗಿ ವಿದ್ಯಾರ್ಥಿ ಹಾಗೂ ಯುವ ಸಮೂಹವು ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ. ಆದುದರಿಂದ, ಪ್ರತಿಯೊಬ್ಬರೂ ಸಮಾಜದ ಸ್ವಾಸ್ಥ ಕಾಪಾಡಲು ಇವರಲ್ಲಿ ಈ ವೌಲ್ಯಗಳನ್ನು ಬೆಳೆಸಲು ಮುಂದಾಗಬೇಕು ಎಂದು ಅವರು ಹೇಳಿದರು.

ಲಕ್ಷಾಂತರ ಜನ ಮಹನೀಯರ ತ್ಯಾಗ, ಬಲಿದಾನದ ಪರಿಣಾಮವಾಗಿ ಶತಮಾನಗಳ ಕಾಲ ದಾಸ್ಯದ ಸಂಕೋಲೆಯಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ. ಇವತ್ತಿನ ಪೀಳಿಗೆಗೆ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ತಿಳಿಸಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಮುಹಮ್ಮದ್ ಇಕ್ಬಾಲ್ ಹೊತ್ತುರ್ ತಿಳಿಸಿದರು.

ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಗಳು ವೇಷಭೂಷಣ, ದೇಶಭಕ್ತಿ ಗೀತೆ, ಬಿಎಸ್‌ಎಫ್ ಸೈನಿಕರ ಕವಾಯತ್, ಪಿರಮಿಡ್ ರಚನೆ ಹಾಗೂ ಮಹಿಳಾ ಸ್ವಾತಂತ್ರ ಹೋರಾಟಗಾರರ ಪಾತ್ರ, ಮಹಾತ್ಮಗಾಂಧೀಜಿಯವರ ಐತಿಹಾಸಿಕ ಚಳವಳಿಗಳ ಅಂಕಣವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದಕ್ಕೆ ಮುಹಮ್ಮದ್ ಇಕ್ಬಾಲ್ ಹೊತ್ತುರ್ ಇದೇ ಸಂದರ್ಭದಲ್ಲಿ ಬಹುಮಾನ ಘೋಷಿಸಿದರು.

ಕಾರ್ಯಕ್ರಮದಲ್ಲಿ ಸಿಲಿಕಾನ್ ಸಿಟಿ ಶಾಲೆಯ ಕಾರ್ಯದರ್ಶಿ ಝಿಯಾವುಲ್ಲಾ ಖಾನ್, ಟ್ರಸ್ಟ್ ಸದಸ್ಯರಾದ ಅಬ್ದುಲ್ ರಹ್ಮಾನ್, ಯೂಸುಫ್, ಇಬ್ರಾಹೀಂ ಶಫೀಕ್, ಪ್ರಿಸ್ಟೀನ್ ಶಾಲೆಯ ಸಿಇಓ ಹಮೀದ್‌ ಬೇಗ್, ಪ್ರಾಂಶುಪಾಲೆ ನೂರ್ ಆಯಿಷಾ, ಅಹ್ಮದಿ ಬೇಗಂ, ನಸೀಮ್‌ ತಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News