ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತರ ಕಡೆಗಣನೆಯಾಗಿಲ್ಲ: ಜೆಡಿಎಸ್ ಮುಖಂಡ ಝಫರುಲ್ಲಾ ಖಾನ್

Update: 2018-08-18 15:42 GMT

ಬೆಂಗಳೂರು, ಆ.18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತರ ಕಡೆಗಣನೆಯಾಗಿಲ್ಲ. ಆದರೂ, ಕೆಲವರು ಉದ್ದೇಶಪೂರ್ವಕವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್ ತಿಳಿಸಿದರು.

ಶನಿವಾರ ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗುವವರು ಯಾವುದೋ ಒಂದು ಪಕ್ಷ, ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಅವರು ರಾಜ್ಯದ ಎಲ್ಲ ಜನಸಮುದಾಯಕ್ಕೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ಕುಮಾರಸ್ವಾಮಿಯವರು ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ನಾವು ನಿರೀಕ್ಷಿಸಿದಂತೆ ಬಂದಿಲ್ಲ. ರಾಜಕಾರಣದಲ್ಲಿ ಏರಿಳಿತಗಳು ಸಾಮಾನ್ಯ ಎಂದು ಅವರು ಹೇಳಿದರು.

ಜೆಡಿಎಸ್ ಜಾತ್ಯತೀತ ಪಕ್ಷ. ಎಲ್ಲ ಜಾತಿ, ಧರ್ಮ, ಜನಾಂಗಗಳನ್ನು ಒಂದಾಗಿ ಕರೆದೊಯ್ಯಲು ನಮ್ಮ ಪಕ್ಷ ಬದ್ಧವಾಗಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ ಒಬ್ಬ ಅಲ್ಪಸಂಖ್ಯಾತ ಸಮುದಾಯದವರಿಗೆ ಅವಕಾಶ ಸಿಗಬಹುದು. ಅಲ್ಲದೆ, ಪಕ್ಷ ಹಾಗೂ ನಿಗಮ, ಮಂಡಳಿಗಳಲ್ಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಝಫರುಲ್ಲಾಖಾನ್ ತಿಳಿಸಿದರು.

ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸೈಯದ್ ಶಫೀಉಲ್ಲಾ ಮಾತನಾಡಿ, ಬಕ್ರೀದ್ ಹಬ್ಬದ ಪ್ರಯುಕ್ತ ಕಾನೂನು ಚೌಕಟ್ಟಿನಲ್ಲಿಯೆ ಜಾನುವಾರುಗಳನ್ನು ತರುತ್ತಿದ್ದರೂ ಕೆಲ ಸಂಘಟನೆಗಳ ಕಾರ್ಯಕರ್ತರು ಅಂತಹ ಜಾನುವಾರುಗಳನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಂಡು, ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಈ ಸಂಬಂಧ ಪಕ್ಷದ ನಾಯಕರಾದ ಝಫರುಲ್ಲಾಖಾನ್, ಬಿ.ಎಂ.ಫಾರೂಕ್, ರೋಷನ್ ಅಬ್ಬಾಸ್, ಮೊಹಿದ್ ಅಲ್ತಾಫ್ ಹಾಗೂ ತಾನು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಶಫೀಉಲ್ಲಾಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News