ದಾಸ ಸಾಹಿತ್ಯ, ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ: ಪೇಜಾವರ ಶ್ರೀ

Update: 2018-08-18 15:44 GMT

ಬೆಂಗಳೂರು, ಆ.18: ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ನಾಡಿನ ಎರಡು ಕಣ್ಣುಗಳಿದ್ದಂತೆ. ದಾಸ ಸಾಹಿತ್ಯ ಜನ ಸಾಮಾನ್ಯರಿಂದ ಅಂತರವನ್ನು ಕಾಯ್ದುಕೊಂಡಿದ್ದ ಸಂದರ್ಭದಲ್ಲಿ ಹರಿದಾಸರು ತಮ್ಮ ಕೃತಿಗಳ ಮೂಲಕ ಹತ್ತಿರಕ್ಕೆ ಕೊಂಡೊಯ್ದರು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದ ಹೇಳಿದ್ದಾರೆ.

ಎನ್.ಆರ್. ಕಾಲನಿಯ ಶ್ರೀರಾಮ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ರಾಷ್ಟ್ರೀಯ ಅಭಿನಂದನೆ ಹಾಗೂ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹರಿದಾಸರು ವಿದೇಶದಲ್ಲಿ ದಾಸ ಸಾಹಿತ್ಯದ ಕಂಪನ್ನು ಹರಡಿದರು. ಇದರಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದಾಸ ಸಾಹಿತ್ಯವನ್ನು ಜನಸಾಮಾನ್ಯರ ಮನೆ ಮನಗಳಿಗೆ ತಲುಪಿಸಿದ್ದಾರೆ. ಅಲ್ಲದೆ, ಶಾಸದ ಜಟೆಯಲ್ಲಿದ್ದ ಜ್ಞಾನಗಂಗೆಯನ್ನು ಜನಸಾಮಾನ್ಯರಿಗೆ ದೊರೆಯುವಂತೆ ಮಾಡಿದರು ಎಂದು ಪೇಜಾವರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಯಕ ಆರ್.ಕೆ.ಪದ್ಮನಾಭ ಮಾತನಾಡಿ, ಕನ್ನಡ ಹರಿದಾಸ ಸಾಹಿತ್ಯಕ್ಕೆ ಪಾರ್ಥಸಾರಥಿ ಅವರು ವಿದ್ಯಾ ಕೈಂಕರ್ಯ ಮಾಡುತ್ತಿದ್ದಾರೆ. ದಾಸ ಸಾಹಿತ್ಯದ ಅಂತಾರಾಷ್ಟ್ರೀಯ ರಾಯಭಾರಿಯಾಗಿದ್ದು, ಎಲ್ಲೆಡೆ ದಾಸ ಸಾಹಿತ್ಯದ ಮಹತ್ವವನ್ನು ಸಾರುತ್ತಿದ್ದಾರೆ. ಸಂಗೀತದಲ್ಲಿ ಪರಿಪೂರ್ಣತೆ ಇದ್ದರೆ ಹರಿದಾಸರಾಗುತ್ತಾರೆ ಎಂದು ಹೇಳಲಾಗುತ್ತದೆ. ಸಾಹಿತಿಯಾದ ಪಾರ್ಥಸಾರಥಿ ಅವರ ಅಂತರಾಳದಲ್ಲಿ ಸಂಗೀತದ ಶಕ್ತಿಯಿದೆ ಎಂದು ಬಣ್ಣಿಸಿದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಪಾರ್ಥಸಾರಥಿ ರಚಿಸಿದ ವಿವಿಧ ಪುಸ್ತಕವನ್ನು ಬಿಡುಗಡೆ ಮಾಡಿದರು. ಹರಿದಾಸ ಸಾಹಿತ್ಯ ಸೌರಭ, ಪಾಂಚಜನ್ಯ, ವೈಕುಂಠ ವರ್ಣನೆ, ಪಾರ್ಥಸಾರಥಿ ವಿಠಲದಾಸರ ಜನಪ್ರಿಯ ಕೀರ್ತನೆ, ಪಾರ್ಥಸಾರಥಿ ವಿಠಲದಾಸರ ಉಗಾಭೋಗಗಳು ಹಾಗೂ ಸುಳಾದಿಗಳು, ಬೃಹತ್ತನ್ನು ಸಾಧಿಸು, ಅಮೃತ ನುಡಿಗಳು, ಇಂಗ್ಲಿಷ್ ಕೃತಿ ಸೂಪರ್ ಸಕ್ಸಸ್ ಹಾಗೂ ಪಾರ್ಥಸಾರಥಿ ಅವರಿಗೆ 70ವರ್ಷ ತುಂಬಿದ ಹಿನ್ನೆಲೆ ಸಿದ್ಧಗೊಳಿಸಿದ ‘ಭೀಮರಥಿ ಭಾಗಿನ’ ಅಭಿನಂದನಾ ಗ್ರಂಥವನ್ನು ಅನಾವರಣ ಮಾಡಲಾಯಿತು.

ಇದೇ ವೇಳೆ ಪಾರ್ಥಸಾರಥಿ ದಂಪತಿಯನ್ನು ನೆರೆದಿದ್ದ ಗಣ್ಯರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಶಿಕ್ಷಣ ತಜ್ಞ ಕೆ.ಈ. ರಾಧಾಕೃಷ್ಣ, ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ, ಚಿತ್ರ ನಟ ಶಿವರಾಂ, ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಯು.ಬಿ. ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News