ಹೊಸ ವಿವಾದ ಮೈಮೇಲೆ ಎಳೆದುಕೊಂಡ ನವಜ್ಯೋತ್ ಸಿಂಗ್ ಸಿಧು

Update: 2018-08-19 03:58 GMT

ಇಸ್ಲಾಮಾಬಾದ್, ಆ.19: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಕ್ರಿಕೆಟ್ ತಾರೆ ಹಾಗೂ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಭಾಗವಹಿಸಲು ಸರ್ಕಾರದ ಅನುಮತಿ ಇದ್ದರೂ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ "ಅಧ್ಯಕ್ಷ" ಮಸೂದ್ ಖಾನ್ ಪಕ್ಕ ಆಸೀನರಾದ ಬಗ್ಗೆ ವಿವಾದದ ಕಿಡಿ ಹೊತ್ತಿಕೊಂಡಿದೆ.

ಸಿಧು ಅವರಿಗೆ ಮಸೂದ್ ಖಾನ್ ಬಳಿ ಆಸನ ವ್ಯವಸ್ಥೆ ಮಾಡಿದ್ದಲ್ಲದೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಾಜ್ವಾ ಅವರನ್ನು ಎರಡು ಬಾರಿ ಆಲಂಗಿಸಿಕೊಂಡದ್ದು ಕೂಡಾ ವಿವಾದಕ್ಕೆ ಇನ್ನಷ್ಟು ಬೆಂಕಿ ಹಚ್ಚಿದೆ. ಮುಂದಿನ ಸಾಲಿನಲ್ಲಿ ಆಸೀನರಾಗಿದ್ದ ಸಿಧು ಅವರನ್ನು ಬಾಜ್ವಾ ಆಲಂಗಿಸಿಕೊಂಡರು ಹಾಗೂ ಇಬ್ಬರೂ ಸ್ವಲ್ಪ ಕಾಲ ಮಾತುಕತೆ ನಡೆಸಿದರು. ಆತ್ಮೀಯತೆಯ ನಗು ವಿನಿಮಯವಾಯಿತು. ಇಬ್ಬರೂ ಮಾತುಕತೆ ನಡೆಸುತ್ತಿದ್ದಾಗ, ಮತ್ತೊಮ್ಮೆ ಆಲಂಗಿಸಿಕೊಂಡರು. ಸಿಧು ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಬಗೆಗಿನ ಭಾರತದ ನಿಲುವಿನಂತೆ, ಭಾರತ ಸರ್ಕಾರ ಮಸೂದ್ ಅವರನ್ನು ಅಧಿಕೃತವಾಗಿ ಅಧ್ಯಕ್ಷ ಎಂದು ಪರಿಗಣಿಸುವುದಿಲ್ಲ ಹಾಗೂ ಭಾರತದ ಚುನಾಯಿತ ಪ್ರತಿನಿಧಿಗಳು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ಬಗೆಯ ಆಸನ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನುವುದು ಹಲವರ ಆರೋಪ. ಸಿಧು ಮಸೂದ್ ಅವರ ಕೈ ಕುಲುಕಿ, ಸಂತಸ ವಿನಿಮಯ ಮಾಡಿಕೊಂಡಿದ್ದರು.

"ಗುರುನಾನಕ್ ಅವರ 550ನೇ ಜಯಂತಿ ಅಂಗವಾಗಿ ಕರ್ತಾರ್‌ಪುರ ಮಾರ್ಗಾವನ್ನು ಮುಕ್ತಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಬಾಜ್ವಾ ಹೇಳಿದ್ದಾರೆ" ಎಂದು ಸಿಧು ವಿವರಿಸಿದ್ದಾರೆ. ಸಿಧು ನಿಲುವನ್ನು ಸಮರ್ಥಿಸಿಕೊಂಡಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖಡ್, ಈ ಭೇಟಿಯನ್ನು ಕ್ರೀಡಾಪಟು ಮತ್ತೊಬ್ಬರಿಗೆ ಸ್ಪಂದಿಸಿದ ಕ್ರಮ ಎಂದು ಪರಿಗಣಿಸಬೇಕು. ಆದರೆ ಹೊಸ ಪಾಕಿಸ್ತಾನಿ ಪ್ರಧಾನಿ ತಾವು ಸೇನೆಯ ಕೈಗೊಂಬೆಯಲ್ಲ ಎಂದು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಟಿವಿ ಜತೆ ತಮ್ಮ ಎಂದಿನ ಕಾವ್ಯಮಯ ಭಾಷೆಯಲ್ಲೇ ಮಾತನಾಡಿದ ಸಿಧು, ಇಮ್ರಾನ್ ಪ್ರಧಾನಿಯಾಗಿರುವುದರಿಂದ ಭಾರತ- ಪಾಕಿಸ್ತಾನ ನಡುವಿನ ಶಾಂತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News