ಅತಿಥಿ ಗೃಹಗಳ ಬೀದಿ ದೀಪಗಳ ಕೆಳಗೆ ಕುಳಿತು ಓದಿದ್ದೇನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-08-19 13:58 GMT

ಬೆಂಗಳೂರು, ಆ.19: ಪ್ರತಿಭೆ ಎನ್ನುವುದು ಜಾತಿ-ಹುಟ್ಟಿನಿಂದ ಬರುವುದಿಲ್ಲ. ಎಲ್ಲರೂ, ಪ್ರತಿಭೆ ಗಳಿಸೋಕೆ ಸಾಧ್ಯವಾಗಿದೆ. ಪ್ರತಿಭೆ ಎನ್ನುವುದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಏರ್ಪಡಿಸಿದ್ದ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆಯನ್ನು ಗ್ರಹಿಸಿ, ಬೆಳೆಸೋಕೆ ಸಾಧ್ಯ. ನಾವು ಹಿಂದುಳಿದ ವರ್ಗದವರು, ದಲಿತರು, ಬಡವರಾಗಿ ಹುಟ್ಟಿದ್ದೇವೆ. ಆದರೆ, ಶ್ರೀಮಂತರ ಮಕ್ಕಳು ಮಾತ್ರ ಪ್ರತಿಭಾವಂತರು ಎನ್ನುವುದು ತಪ್ಪು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪೋಷಕರು, ವಿದಾರ್ಥಿಗಳಲ್ಲಿ ಓದುವ ಶ್ರದ್ಧೆ, ಉತ್ತೇಜನೆ, ಆಸಕ್ತಿ ನೀಡುವ ಪ್ರಚೋದಕಗಳಾಗಬೇಕು. ನಾವೆಲ್ಲ ಸರಾಸರಿ ಅಂಕ ಪಡೆದ ವಿದ್ಯಾರ್ಥಿಗಳು, ಗಣಿತದಲ್ಲಿ ಮಾತ್ರ 90 ಅಂಕ ಬರುತ್ತಿತ್ತು. ಎಂಬಿಬಿಎಸ್‌ಗೆ ಸೀಟು ಪಡೆಯಲು ಎರಡು ಬಾರಿ ಪ್ರಯತ್ನಪಟ್ಟರೂ ಸಿಗಲಿಲ್ಲ. ಸಿಕ್ಕಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ನೆನಪು ಮಾಡಿಕೊಂಡರು.

ಪಿಯುಸಿ ವ್ಯಾಸಂಗ ಮಾಡುತ್ತಿದಾಗ ಸರಕಾರಿ ಅತಿಥಿ ಗೃಹಗಳ ಬೀದಿ ದೀಪಗಳ ಕೆಳಗೆ ಕುಳಿತು ಓದಿದ್ದೇನೆ. ಅಷ್ಟೇ ಅಲ್ಲದೆ, ನಾನೇ ಅಡಿಗೆ ಮಾಡಿ ತಿನ್ನಬೇಕಿತ್ತು, ಕೆಲವೊಮ್ಮೆ ಹಸಿವಿನಿಂದ ಇರಬೇಕಿತ್ತು ಈ ಎಲ್ಲ ಅನುಭವಗಳಿಂದಲೇ ವಿದ್ಯಾಸಿರಿ ಯೋಜನೆ, ಉಚಿತ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಕಾರಣವಾಯ್ತು.ಅನ್ನಭಾಗ್ಯವೂ ಅನುಭವವೆ, ನೀರಾವರಿ ಇರುವ ಜನರು ವ್ಯವಸಾಯ ಮಾಡಿ ಅನ್ನ ಊಟ ಮಾಡುತ್ತಿದ್ದರು. ಶುಷ್ಕ ಭೂಮಿ ಇದ್ದವರು ರಾಗಿ ಮುದ್ದೆ ಊಟ ಮಾಡುತ್ತಿದ್ದರು. ಅಪರೂಪಕ್ಕೆ ಅನ್ನ ತಿನ್ನುತ್ತಿದ್ದರು, ಇಲ್ಲದಿದ್ದರೆ, ಹಸಿವಿನಿಂದ ಮಲಗುತ್ತಿದ್ದರು. ಯಾರು ಅನ್ನಕ್ಕಾಗಿ ಬೇರೆಯವರ ಮನೆ ಬಳಿ ಹೋಗಬಾರದು. ಅದಕ್ಕೆ ರಾಜ್ಯದಲ್ಲಿ ಬಡವರಿಗೆ 7ಕೆಜಿ ಅಕ್ಕಿಯನ್ನು ನೀಡುತ್ತಿರುವುದಾಗಿ ಅವರು ತಿಳಿಸಿದರು.

ಪ್ರತಿಯೊಬ್ಬರಿಗೂ ಶಿಕ್ಷಣದಿಂದ ಅರಿವು, ಜಾಗೃತಿ, ಜ್ಞಾನ, ಸ್ವಾಭಿಮಾನ ಬರುತ್ತದೆ. ಸ್ವಾಭಿಮಾನವಿಲ್ಲದ ಜನ ಮನುಷ್ಯರೇ ಅಲ್ಲ, ಯಾರಲ್ಲಿ ಸ್ವಾಭಿಮಾನ ಇರುವುದಿಲ್ಲವೋ ಅವರು ಗುಲಾಮಗಿರಿಗೆ ಒಳಪಡುತ್ತಾರೆ. ಹಾಗೂ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ ಸಮುದಾಯಗಳಿಗೆ ಅವಕಾಶ ಸಿಕ್ಕಾಗ ಮಾತ್ರ ನಿಜಕ್ಕೂ ದೇಶಕ್ಕೆ ಸ್ವಾತಂತ್ರ ಸಿಕ್ಕಂತೆ, ಅದಕ್ಕೆ ಶಿಕ್ಷಣದ ಅವಶ್ಯಕತೆ ಇದೆ. ಶೋಷಿತ, ಅನ್ಯಾಯಕೊಳ್ಳಗಾದವರು ಶೇ.100ರಷ್ಟು ಶಿಕ್ಷಣ ಪಡೆದಾಗ ಮಾತ್ರ ಸಮಾತೋಲನ ಸಮುದಾಯ ನಿರ್ಮಾಣವಾಗುತ್ತವೆ ಎಂದು ಸಿದ್ದರಾಮಯ್ಯ ನುಡಿದರು.

ಕುರುಬರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕು ಎಂಬ ಬೇಡಿಕೆಗೆ, ಇದು ಪ್ರಯೋಗಿಕವಾಗಿ ಅಸಾಧ್ಯವಾಗಿದ್ದು, ಸುಮ್ಮನೆ ಸಮುದಾಯವರಲ್ಲಿ ಭ್ರಮೆ ಹುಟ್ಟಿಸಬಾರದು ಎಂದ ಅವರು, ಮಡಿವಾಳ, ಹಿಡಿಗ, ಕುರುಬ, ಅಗಸ, ತಿಗಳ ಸಮುದಾಯದವರನ್ನು ಸೇರಿಸಬೇಕೆಂಬ ಕೂಗು ಇದೆ. ಆದರೆ, ಇದೆಲ್ಲ ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಮುದಾಯದ ಪ್ರತಿಭಾವಂತ 1,350 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಸಚಿವರಾದ ಬಂಡಪ್ಪ ಕಶಂಪೂರ್, ಆರ್.ಶಂಕರ್, ಮಾಜಿ ಎಚ್.ಎಂ.ರೇವಣ್ಣ, ಸಿದ್ದಾರಾಮಾನಂದಪುರಿ ಸ್ವಾಮೀಜಿ, ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಯಮನಪ್ಪ ಸಣ್ಣಕ್ಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News