ಬೆಂಗಳೂರು : ರೌಡಿ ಮೂಗ ಸೇರಿ ಮೂವರು ಸೆರೆ

Update: 2018-08-19 15:19 GMT

ಬೆಂಗಳೂರು, ಆ.19: ಕೊಲೆ ಯತ್ನ ಸೇರಿದಂತೆ ಇನ್ನಿತರೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ರೌಡಿ ಮೂಗ ಯಾನೆ ನಾಗರಾಜು ಸೇರಿ ಮೂವರನ್ನು ಬಂಧಿಸುವಲ್ಲಿ ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ನಾಗರಾಜ ಯಾನೆ ಮೂಗ(25), ಚಂದ್ರ(32) ಹಾಗೂ ಚಂದ್ರರಾಜ್(27) ಬಂಧಿತ ಆರೋಪಿಗಳಾಗಿದ್ದು, ಇವರನ್ನು ವಿಚಾರಣೆ ಗೊಳಪಡಿಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಪ್ರಕರಣದ ವಿವರ: ನಗರದ ಹಾಲನಾಯಕನಹಳ್ಳಿ ಕೆರೆಯ ಬಳಿ ನಿರ್ಜನ ಪ್ರದೇಶದಲ್ಲಿ ಆರೋಪಿಗಳು, ಮಾರಕಾಸ್ತ್ರಗಳಿನ್ನಿಟ್ಟುಕೊಂಡು ಡಕಾಯಿತಿಗೆ ಹೊಂಚು ಹಾಕುತ್ತಿರುವ ಮಾಹಿತಿ ಆಧಾರ ಮೇಲೆ ಆ.13ರಂದು ಬೆಳ್ಳಂದೂರು ಠಾಣಾ ಪಿಎಸ್ಸೈ ಬಿ.ಬಸವರಾಜು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ರೌಡಿ ಮೂಗ ಎಂಬಾತ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ನಂತರ, ಆತನ ಸಹಚರರಿಂದ ಇಲ್ಲಿನ ಕುಮಾರಸ್ವಾಮಿ ಲೇಔಟ್, ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿದ್ದ 2 ಬೈಕ್ ಪತ್ತೆಯಾಗಿವೆ. ಅದೇ ರೀತಿ, ಒಟ್ಟು 27 ಪ್ರರಕಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಇನ್ನೂ ಈತ ನ್ಯಾಯಾಲಯದ ಜಾಮೀನಿನ ಮೇಲೆ ಇದ್ದು, ನ್ಯಾಯಾಲಯಕ್ಕೂ ಹಾಜರಾಗದ ಕಾರಣ ವಾರೆಂಟ್ ಹೊರಡಿಸಲಾಗಿತ್ತು. ಅದೇ ರೀತಿ, ಕೆಲವರ ಕೊಲೆ ಯತ್ನ ಪ್ರಕರಣಗಳಲ್ಲಿ ಈತನ ಮೊಬೈಲ್ ಕರೆಗಳ ದಾಖಲೆ ಸಿಕ್ಕಿವೆ ಎಂದು ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೆಚ್ಚುವರಿ ಮಾಹಿತಿಗಾಗಿ ಇವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News