ವಯರ್ ಲೆಸ್ ಬ್ಲೂಟೂತ್ ಗಳನ್ನು ಬಳಸುತ್ತಿದ್ದೀರಾ ?: ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿದಿರಲಿ

Update: 2018-08-20 11:06 GMT

ರಿಯಾದ್, ಆ. 20 : ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನುಗಳನ್ನು ಬಳಸದಂತೆ ವೈದ್ಯರು ಜನರಿಗೆ ಎಚ್ಚರಿಕೆ ನೀಡುತ್ತಿದ್ದು ಇದು ನಿದ್ದೆ ಸಮಸ್ಯೆ, ಕಿವುಡುತನ ಹಾಗೂ ಮೆದುಳಿನ ಕ್ಯಾನ್ಸರಿಗೂ ಕಾರಣವಾಗಬಹುದೆಂದು ಹೇಳಿದ್ದಾರೆ.

700 ದಿರ್ಹಮ್ ಗೂ ಹೆಚ್ಚಿನ ಮೌಲ್ಯದ ಈ ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನುಗಳು ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದ್ದು, ದಿನವೊಂದಕ್ಕೆ ಅಗತ್ಯ ಬಿದ್ದರೆ ಒಂದು ಅಥವಾ ಎರಡು ನಿಮಿಷಕ್ಕಿಂತಲೂ ಹೆಚ್ಚು ಸಮಯ ಉಪಯೋಗಿಸಬಾರದು ಮತ್ತು ಉಪಯೋಗಿಸಿದ ಕೂಡಲೇ ಅದನ್ನು ಕಿವಿಯಿಂದ ತೆಗೆಯಬೇಕು ಎಂದು ಬರೀನ್ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಇಲ್ಲಿನ ತಜ್ಞ ವೈದ್ಯ ಡಾ. ನಾಸಿರ್ ನವಾಸ್ರೆಹ್ ಹೇಳುತ್ತಾರೆ.

ಈ ಜನಪ್ರಿಯ ಸಾಧನದ ಉಪಯೋಗದಿಂದ ಮೆದುಳಿನ ಕ್ಯಾನ್ಸರ್ ಉಂಟಾಗಬಹುದೆಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ ಎಂದ ಅವರು, ಈ ಬ್ಲೂಟೂಥ್ ಹೆಡ್ ಫೋನುಗಳು ಮೈಕ್ರೋವೇವ್ ನಂತಹದೇ ತರಂಗಗಳಿಂದ ಕಾರ್ಯನಿರ್ವಹಿಸುತ್ತಿದ್ದು, ವಸ್ತುಶಃ ಮಾನವನ ಮೆದುಳನ್ನು ಬೇಯಿಸುತ್ತದೆ ಎಂದರು.

ಧ್ವನಿಯ ಗುಣಮಟ್ಟ ಉತ್ತಮವಾದಷ್ಟು ತರಂಗಗಳಿಂದ ಅಪಾಯ ಹೆಚ್ಚು, ಇಪ್ಪತ್ತು ವರ್ಷಕ್ಕಿಂತ ಕೆಳಗಿನವರು 25 ವರ್ಷಕ್ಕೂ ಹೆಚ್ಚು ಕಾಲ ಇಂತಹ ಹೆಡ್ ಫೋನುಗಳನ್ನು ಬಳಸಿದರೆ ಅವರಿಗೆ ಮೆದುಳಿನ ಕ್ಯಾನ್ಸರ್ ಉಂಟಾಗಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ. ಇಂತಹ ಹೆಡ್ ಫೋನ್ ಬಳಸುವವರಿಗೆ ಮೆದುಳಿನ ಕ್ಯಾನ್ಸರ್ ಉಂಟಾಗುವ ಸಂಭಾವ್ಯತೆ ಇತರರಿಗಿಂತ ಮೂರು ಪಟ್ಟು ಅಧಿಕ, ಈ ಸಾಧನ ತೀವ್ರ ತಲೆ ನೋವಿನ ಸಮಸ್ಯೆಗೆ ಕೂಡ ಕಾರಣವಾಗಬಹುದು ಎಂದು ಅವರು ತಿಳಿಸುತ್ತಾರೆ.

ಅತಿಯಾದ ಸೆಲ್ ಫೋನ್ ವಿಕಿರಣದಿಂದಾಗಿ ಹೃದಯದ ನರಗಳ ಸುತ್ತ ಇರುವ ಜೀವಕೋಶಗಳ ಟ್ಯೂಮರ್ ಗೆ ಕಾರಣವಾಗಬಹುದೆಂದು ಪ್ರಯೋಗಾಲಯ ಗಳಲ್ಲಿ ಇಲಿಗಳ ಮೇಲೆ ನಡೆಸಲಾದ ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಯುನಿವರ್ಸಲ್ ಹಾಸ್ಪಿಟಲ್ ಇಲ್ಲಿನ ನರರೋಗ ತಜ್ಞ ಡಾ. ರಾಜೇಶ್ ಬೇಬಿ ಹೇಳುತ್ತಾರೆ.

ಬ್ಲೂಟೂಥ್ ಹೆಡ್ ಫೋನುಗಳನ್ನು ಬಳಸುವ ಬದಲು ಮೊಬೈಲ್ ಫೋನಿನ ಸ್ಪೀಕರ್ ಗಳನ್ನು ಬಳಸಿ ಮಾತನಾಡಬೇಕು ಎಂದೂ ತಜ್ಞರು ಸಲಹೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News