ಶೂಟಿಂಗ್: ಭಾರತಕ್ಕೆ ಮತ್ತೊಂದು ಬೆಳ್ಳಿ ಗೆದ್ದುಕೊಟ್ಟ ಶೆರೊನ್

Update: 2018-08-20 12:44 GMT

ಪಾಲೆಂಬಾಂಗ್, ಆ.20: ಭಾರತದ ಯುವ ಶೂಟರ್ ಲಕ್ಷ್ಯ ಶೆರೊನ್ ಏಶ್ಯನ್ ಗೇಮ್ಸ್‌ನ ಪುರುಷರ ಟ್ರಾಪ್ ಇವೆಂಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ಗೇಮ್ಸ್‌ನ ಎರಡನೇ ದಿನವಾದ ಸೋಮವಾರ ಭಾರತ ಶೂಟಿಂಗ್‌ನಲ್ಲಿ ಎರಡನೇ ಬೆಳ್ಳಿ ಪದಕ ಜಯಿಸಿದೆ.

ದಿನದಾರಂಭದಲ್ಲಿ ನಡೆದ ಪುರುಷರ 10 ಮೀ. ಏರ್‌ರೈಫಲ್ ಇವೆಂಟ್‌ನಲ್ಲಿ ದೀಪಕ್ ಕುಮಾರ್ 247.7 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು.

ಜೆಎಸ್‌ಸಿ ಶೂಟಿಂಗ್ ರೆಂಜ್‌ನಲ್ಲಿ 19ರ ಹರೆಯದ ಶೆರೊನ್  45ರಲ್ಲಿ 39 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ತೈಪೆ ಆಟಗಾರ ಕುಂಪಿ ಯಾಂಗ್ 48 ಅಂಕ ಗಳಿಸಿ ಗೇಮ್ಸ್ ದಾಖಲೆ ಸರಿಗಟ್ಟಿದ್ದಲ್ಲದೆ ಚಿನ್ನದ ಪದಕ ಜಯಿಸಿದರು. ಕೊರಿಯಾ ಡೆಮಿಯೊಂಗ್ 30 ಅಂಕ ಗಳಿಸಿ ಕಂಚು ಜಯಿಸಿದರು.

ಮಾನವ್‌ಜಿತ್ ಸಿಂಗ್ ಸಂಧು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ, ಫೈನಲ್ ರೌಂಡ್‌ನಲ್ಲಿ 30ರಲ್ಲಿ ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು.

 ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಪದಕ ಗೆದ್ದುಕೊಂಡಿದೆ. ಮೊದಲ ದಿನವಾದ ರವಿವಾರ ರವಿಕುಮಾರ್ ಮಿಕ್ಸೆಡ್ ಟೀಮ್ ಇವೆಂಟ್‌ನಲ್ಲಿ ಅಪೂರ್ವಿ ಚಾಂಡೇಲಾ ಜೊತೆಗೂಡಿ ಕಂಚು ಜಯಿಸಿದ್ದಾರೆ. ಭಾರತ ಒಟ್ಟಾರೆ ಗೇಮ್ಸ್‌ನಲ್ಲಿ 4ನೇ ಪದಕ ಜಯಿಸಿದೆ. ರವಿವಾರ ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಚಿನ್ನ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News