ನೆರೆಪೀಡಿತ ಕೇರಳಕ್ಕೆ 50 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಲಿಲ್

Update: 2018-08-20 18:37 GMT

ದುಬೈ, ಆ. 20: ಯುಎಇಯ ವಿಪಿಎಸ್ ಹೆಲ್ತ್‌ಕೇರ್‌ನ ಸ್ಥಾಪಕರಾಗಿರುವ ಕೇರಳ ಸಂಜಾತ ಡಾ. ಶಂಶೀರ್ ವಯಲಿಲ್ ಅವರು ತವರು ರಾಜ್ಯದಲ್ಲಿ ಪ್ರವಾಹದಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಪ್ರದೇಶಗಳಲ್ಲಿ ಪ್ರಮುಖ ಮೂಲ ಸೌಕರ್ಯಗಳ ಪುನರ್‌ ನಿರ್ಮಾಣಕ್ಕಾಗಿ 26 ಮಿಲಿಯನ್ ದಿರ್ಹಮ್‌ (ಸುಮಾರು 50 ಕೋಟಿ ರೂ.) ಬೃಹತ್ ಆರ್ಥಿಕ ನೆರವಿನ ಘೋಷಣೆ ಮಾಡಿದ್ದಾರೆ.

ಡಾ. ಶಂಶೀರ್ ವಯಲಿಲ್ ಮಧ್ಯಪ್ರಾಚ್ಯದ ಅತ್ಯಂತ ಶ್ರೀಮಂತ ಭಾರತೀಯರಲ್ಲಿ ಓರ್ವರಾಗಿದ್ದಾರೆ.

ಶತಮಾನದ ಭೀಕರ ಮಳೆಯಿಂದಾಗಿ ಕೇರಳದಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆ 350ಕ್ಕೂ ಹೆಚ್ಚುವ ಭೀತಿಯಿದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಪ್ರವಾಹದ ನೀರು ಇಳಿದ ಬಳಿಕ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. 

ರಸ್ತೆಗಳು, ಜಲ ಪೂರೈಕೆ ನಿರ್ವಹಣೆ ವ್ಯವಸ್ಥೆಗಳು, ಶಾಲೆಗಳು ಇವೆಲ್ಲವುಗಳ ಪುನರ್ ನಿರ್ಮಾಣವಾಗಬೇಕಿದೆ. ಪುನರ್ ನಿರ್ಮಾಣಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾದ ತಕ್ಷಣ ಡಾ. ಶಂಶೀರ್ ವಯಲಿಲ್ ಅವರ 26 ಮಿ. ದಿರ್ಹಮ್ ಕೊಡುಗೆ ಲಭ್ಯವಾಗಲಿದೆ.

ಈ ಹಣವನ್ನು ರಾಜ್ಯಾದ್ಯಂತ ಪುನರ್ವಸತಿ ಕಾರ್ಯಗಳಿಗಾಗಿ ವೆಚ್ಚ ಮಾಡಲಾಗುವುದು ಎಂದು ‘ದಿ ನ್ಯಾಷನಲ್’ಗೆ ನೀಡಿದ ಸಂದರ್ಶನದಲ್ಲಿ ಡಾ. ಶಂಶೀರ್  ತಿಳಿಸಿದ್ದಾರೆ.

ಅತ್ಯಂತ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿರುವ ಸ್ಥಳಗಳನ್ನು ಗುರುತಿಸಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆ. ತುರ್ತು ನೆರವಿಗಾಗಿ ಕೆಲವು ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಕೇರಳದ ಸಾರ್ವಜನಿಕ ಕ್ಷೇತ್ರದಲ್ಲಿಯ ಗಣ್ಯರ ಬೆಂಬಲದೊಂದಿಗೆ ಉಸ್ತುವಾರಿ ಸಮಿತಿಯ ಮೂಲಕ ನಾವು ಈ ಹಣವನ್ನು ಬಳಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಪಿಎಸ್ ಹೆಲ್ತ್‌ಕೇರ್ ವಿಶೇಷಜ್ಞ ಗುತ್ತಿಗೆದಾರರನ್ನು ತೊಡಗಿಸಲಿದೆ ಮತ್ತು ಅತ್ಯಂತ ಅಗತ್ಯವಿರುವ ಪ್ರದೇಶಗಳಲ್ಲಿ ಹಣದ ಬಳಕೆಯಾಗುವಂತೆ ಸಲಹೆಗಾರರೊಂದಿಗೆ ಈಗಾಗಲೇ ಸಮಾಲೋಚನೆಗಳನ್ನು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಕ್ರಮದಲ್ಲಿ ವಿಪಿಎಸ್ ಹೆಲ್ತ್‌ಕೇರ್ ಔಷಧಿಗಳು, 2000 ವಾಟರ್ ಫಿಲ್ಟರ್ ಸಿಸ್ಟಮ್‌ಗಳು, ಬಟ್ಟೆಗಳು ಮತ್ತು ಆಹಾರಗಳನ್ನು ಕೇರಳಕ್ಕೆ ರವಾನಿಸಲಿದ್ದು, ಈ ಸಾಮಗ್ರಿಗಳನ್ನು ಹೊತ್ತ ಪರಿಹಾರ ವಿಮಾನ ಈ ವಾರ ಅಬುಧಾಬಿಯಿಂದ ಹೊರಡಲಿದೆ.

ಕೇರಳಕ್ಕೆ ನೆರವು ಒದಗಿಸಲು ಖಲೀಫಾ ಝಾಯೆದ್ ಅಲ್ ನಹ್ಯಾನ್ ಪ್ರತಿಷ್ಠಾನವು 10 ಮಿ. ದಿರ್ಹಮ್‌ಗಳಿಗೂ ಅಧಿಕ ನಿಧಿಯನ್ನು ಸಂಗ್ರಹಿಸಿದ್ದು, ಭಾರತೀಯ ಉದ್ಯಮಿಗಳು ಉದಾರ ದೇಣಿಗೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News