ಬ್ರಾಹ್ಮಣ, ಬನಿಯಾ ಕ್ಲಬ್ ಆಗಿಯೇ ಉಳಿದಿರುವ ಬಿಜೆಪಿ

Update: 2018-08-21 18:31 GMT

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಮುಖಂಡರ ವರ್ಗಶ್ರೇಣಿಯನ್ನು ವಿಶ್ಲೇಷಿಸಿದಾಗ, ಈ ಪಕ್ಷದಲ್ಲಿ ಇನ್ನೂ ಮೇಲ್ವರ್ಗದ ಪ್ರಾಬಲ್ಯವೇ ಮುಂದುವರಿದಿರುವುದು ಮತ್ತು ಅಲ್ಪಸಂಖ್ಯಾತರಿಗೆ ಸೀಮಿತ ಅವಕಾಶವಿರುವುದು ದೃಢಪಟ್ಟಿದೆ.


ನರೇಂದ್ರ ಮೋದಿ ಮತ್ತು ಅಮಿತ್ ಶಾ ಮುಂದಾಳತ್ವದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ದೇಶಾದ್ಯಂತ ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ. ಸಾಂಪ್ರದಾಯಿಕವಾಗಿ ಪಕ್ಷದಿಂದ ದೂರ ಉಳಿದಿರುವ ಕೆಳವರ್ಗದವರ ಮನವೊಲಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ.

ಆದರೆ ಪಕ್ಷದ ಸಾಂಸ್ಥಿಕ ರಚನೆ ವಿಚಾರಕ್ಕೆ ಬಂದರೆ, 38 ವರ್ಷ ಹಳೆಯ ಪಕ್ಷ ಇನ್ನೂ ಮೇಲ್ವರ್ಗದವರ ಸ್ವತ್ತಾಗಿಯೇ ಉಳಿದಿರುವುದು ಕಂಡುಬರುತ್ತದೆ. ಹಿಂದುಳಿದ ವರ್ಗದವರ ಪ್ರಮಾಣ ಕಡಿಮೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯದವರು ತೀರಾ ನಗಣ್ಯ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ.

ಬಿಜೆಪಿಯ ಸಾಂಸ್ಥಿಕ ವ್ಯವಸ್ಥೆಯಲ್ಲಿರುವವರ ಜಾತಿ ಅಂಶಗಳನ್ನು ಆಳವಾಗಿ ಅಧ್ಯಯನ ನಡೆಸಿದಾಗ, ರಾಷ್ಟ್ರಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಪೈಕಿ ಶೇ.75ರಷ್ಟು ಮಂದಿ ಮೇಲ್ವರ್ಗಕ್ಕೆ ಸೇರಿದವರು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶೇ. 60ರಷ್ಟು ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು ಎನ್ನುವುದು ದೃಢಪಟ್ಟಿದೆ.

ರಾಜ್ಯ ಘಟಕಗಳ ಅಧ್ಯಕ್ಷರ ಪೈಕಿ ಶೇ. 65ರಷ್ಟು ಮಂದಿ ಸಾಮಾನ್ಯವರ್ಗದವರು. ಕೆಳಹಂತದಲ್ಲಿ ಕೂಡಾ, ಬಹುತೇಕ ನಾಯಕತ್ವದ ಪಾತ್ರ ನಿರ್ವಹಿಸುವವರು ಮೇಲ್ವರ್ಗದವರೇ. ದೇಶಾದ್ಯಂತ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪೈಕಿ ಶೇ. 65ರಷ್ಟು ಮಂದಿ ಸಾಮಾನ್ಯ ವರ್ಗದವರು.
ಕಳೆದ ಕೆಲ ವರ್ಷಗಳಿಂದ, ಬಿಜೆಪಿ ದಲಿತರನ್ನು ತಲುಪುವತ್ತ ಹೆಜ್ಜೆ ಇಟ್ಟಿದೆ. ಬಿಜೆಪಿ ಎಂದರೆ ಬ್ರಾಹ್ಮಣ- ಬನಿಯಾ ಪಕ್ಷ ಎಂಬ ಭಾವನೆಯನ್ನು ತೊಡೆದುಹಾಕುವ ಪ್ರಯತ್ನ ನಡೆಸಿದೆ. ಆದರೆ ಅದು ಪಕ್ಷದ ಶ್ರೇಣಿವ್ಯವಸ್ಥೆಯಲ್ಲಿ ಇನ್ನೂ ಕಂಡುಬರುತ್ತಿಲ್ಲ.
ಪಕ್ಷದಲ್ಲಿ ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನಾಂಗದವರ ಪ್ರಾತಿನಿಧ್ಯ ತೀರಾ ಕಡಿಮೆ. ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಇಬ್ಬರು ಮಾತ್ರ ಈ ವರ್ಗಕ್ಕೆ ಸೇರಿದ್ದು, ರಾಜ್ಯ ಘಟಕಗಳ ಅಧ್ಯಕ್ಷರಲ್ಲಿ ಈ ಮೂರು ಸಮುದಾಯಗಳಿಗೆ ಸೇರಿದವರಿಲ್ಲ.

ಅಧ್ಯಯನ ಕ್ರಮ
‘ದ ಪ್ರಿಂಟ್’ ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳು, 97 ಮಂದಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರು, 36 ಮಂದಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಅಧ್ಯಕ್ಷರು ಮತ್ತು 24 ರಾಜ್ಯಗಳ 752 ಮಂದಿ ಜಿಲ್ಲಾ ಅಧ್ಯಕ್ಷರ ಪಟ್ಟಿಯನ್ನು ವಿಶ್ಲೇಷಿಸಿದೆ. ಅಸ್ಸಾಂ ಹಾಗೂ ತ್ರಿಪುರಾ ಹೊರತುಪಡಿಸಿದರೆ, ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗದವರೇ ಅಧಿಕ. ಬಿಜೆಪಿಯ ಶ್ರೇಣಿ ವ್ಯವಸ್ಥೆ ಕೂಡಾ ಈ ಸಾಮಾಜಿಕ ಸಂಯೋಜನೆಯನ್ನು ಪ್ರತಿಫಲಿಸುತ್ತದೆ. ಆದ್ದರಿಂದ ಅವರನ್ನು ವಿಶ್ಲೇಷಣೆಯಿಂದ ಹೊರಗಿಡಲಾಗಿದೆ. ಜಾತಿ ವರ್ಗೀಕರಣವನ್ನು ಆಯಾ ರಾಜ್ಯಗಳ ನಿರ್ದಿಷ್ಟ ಜಾತಿ ಸ್ಥಾನಮಾನಕ್ಕೆ ಅನುಗುಣವಾಗಿ ಮಾಡಲಾಗಿದೆ. ಮುಸ್ಲಿಮರು, ಬೌದ್ಧರು ಮತ್ತು ಕ್ರಿಶ್ಚಿಯನ್ನರನ್ನು ಅಲ್ಪಸಂಖ್ಯಾತ ವರ್ಗ ಎಂದು ಪರಿಗಣಿಸಲಾಗಿದೆ.

ಸಿಖ್ ಸಮುದಾಯದ ಬಹುತೇಕ ಪ್ರತಿನಿಧಿಗಳು ಬಿಜೆಪಿಯ ಪಂಜಾಬ್ ಘಟಕದಲ್ಲಿ ಇರುವುದರಿಂದ ಈ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯ ವರ್ಗದಲ್ಲಿ ಸೇರಿಸಿಲ್ಲ. ಪಂಜಾಬ್‌ನ ಹೊರಗೆ, ರಾಷ್ಟ್ರೀಯ ಪದಾಧಿಕಾರಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ತಲಾ ಒಬ್ಬರು ಸಿಖ್ ಸಮುದಾಯದವರಿದ್ದಾರೆ. ಛತ್ತೀಸ್‌ಗಡ ಹಾಗೂ ಮಧ್ಯಪ್ರದೇಶ ಜಿಲ್ಲಾಮಟ್ಟದ ಅಧ್ಯಕ್ಷರಲ್ಲೂ ತಲಾ ಒಬ್ಬರು ಸಿಖ್ ಸಮುದಾಯಕ್ಕೆ ಸೇರಿದವರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಪಟ್ಟಿಯನ್ನು ಪಕ್ಷದ ವೆಬ್‌ಸೈಟ್‌ನಿಂದ ಪಡೆಯಲಾಗಿದೆ.

ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಅಧ್ಯಕ್ಷ, ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ರಾಷ್ಟ್ರೀಯ ಕಾರ್ಯದರ್ಶಿಗಳು, ರಾಷ್ಟ್ರೀಯ ವಕ್ತಾರರು ಮತ್ತು ಮೋರ್ಚಾ ಮುಖ್ಯಸ್ಥರು ಸೇರುತ್ತಾರೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯಗಳ ಬಿಜೆಪಿ ಮುಖಂಡರು ಇದ್ದಾರೆ. ಎಲ್ಲಾ ಅಧ್ಯಕ್ಷರ ಪಟ್ಟಿಯನ್ನು ಪಕ್ಷದ ರಾಜ್ಯ ವೆಬ್‌ಸೈಟ್‌ಗಳಿಂದ ಪಡೆಯಲಾಗಿದೆ. ಕೆಲವನ್ನು ಆಯಾ ರಾಜ್ಯ ಘಟಕಗಳಿಂದ ಪಡೆಯಲಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರ ಸಂಖ್ಯೆ, ದೇಶದ ಜಿಲ್ಲೆಗಳ ಒಟ್ಟು ಸಂಖ್ಯೆಗಿಂತ ಅಧಿಕವಾಗಿದೆ. ಏಕೆಂದರೆ ಕೆಲ ದೊಡ್ಡ ಜಿಲ್ಲೆಗಳಿಗೆ ಒಂದಕ್ಕಿಂತ ಹೆಚ್ಚು ಅಧ್ಯಕ್ಷರನ್ನು ನಿಯೋಜಿಸಲಾಗಿದೆ. ಜಾತಿ ನಿರ್ಧರಣೆಯನ್ನು ಸಾಧ್ಯವಾದಷ್ಟೂ ನಿಖರವಾಗಿ ಮಾಡಲಾಗಿದೆ. ಆದರೆ ಜಾತಿ ಗುರುತಿಸುವಿಕೆಯ ಸಂಕೀರ್ಣತೆ ಹಿನ್ನೆಲೆಯಲ್ಲಿ, ಸ್ವಲ್ಪಮಟ್ಟಿಗೆ ಸಣ್ಣಪುಟ್ಟ ದೋಷಗಳು ಆಗಿರಬಹುದು.

ಮೇಲ್ವರ್ಗದ ಸ್ವತ್ತು
ಬಿಜೆಪಿಯ 50 ಮಂದಿ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ 17 ಮಂದಿ ಬ್ರಾಹ್ಮಣರು, 21 ಮಂದಿ ಇತರ ಮೇಲ್ವರ್ಗಕ್ಕೆ ಸೇರಿದವರು. ನಾಲ್ಕು ಮಂದಿ ಇತರ ಹಿಂದುಳಿದ ವರ್ಗದವರು ಹಾಗೂ ಮೂವರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡ, ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಒಬ್ಬರು ಸಿಖ್ ಸಮುದಾಯದವರು.

ಬಿಜೆಪಿಯ ಅತ್ಯುನ್ನತ ನೀತಿ ರೂಪಿಸುವ ಮಂಡಳಿಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಇಷ್ಟೊಂದು ಕಡಿಮೆ. ಮೂವರು ದಲಿತ ಪ್ರತಿನಿಧಿಗಳ ಪೈಕಿ ಒಬ್ಬರು ಎಸ್ಸಿ ಮೋರ್ಚಾ ಅಧ್ಯಕ್ಷರು. ಇಬ್ಬರು ಮುಸ್ಲಿಮರಲ್ಲಿ ಒಬ್ಬರು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು.
ಬುಡಕಟ್ಟು ಪ್ರಾತಿನಿಧ್ಯವನ್ನು ಗಮನಿಸಿದರೆ ಮತ್ತಷ್ಟು ಹೀನಾಯಮಾನ. ಒಬ್ಬರು ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷರಾದರೆ, ಮಧ್ಯಪ್ರದೇಶದ ಜ್ಯೋತಿ ಧ್ರುವೆಯವರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇನ್ನೂ ವಿವಾದವಿದೆ. ಇವರ ಪರಿಶಿಷ್ಟ ಪಂಗಡ ಪ್ರಮಾಣವನ್ನು ರಾಜ್ಯ ಸರಕಾರ ರದ್ದುಪಡಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.
ಒಟ್ಟು ಶೇ. 76ರಷ್ಟು ಮಂದಿ ರಾಷ್ಟ್ರೀಯ ಪದಾಧಿಕಾರಿಗಳು ಮೇಲ್ವರ್ಗದವರು. ಶೇ. 8ರಷ್ಟು ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಹಾಗೂ ಶೇ. 6ರಷ್ಟು ಮಂದಿ ಪರಿಶಿಷ್ಟರು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯಲ್ಲೂ ಇದೇ ಸ್ಥಿತಿ. 97 ಸದಸ್ಯರ ಪೈಕಿ 29 ಮಂದಿ ಬ್ರಾಹ್ಮಣರು, 37 ಮಂದಿ ಮೇಲ್ವರ್ಗದವರು, 18 ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು. ಏಳು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾದರೆ, ಮೂವರು ಅಲ್ಪಸಂಖ್ಯಾತ ಸಮುದಾಯದವರು. ಸಿಖ್ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ತಲಾ ಒಬ್ಬ ಸದಸ್ಯರಿದ್ದಾರೆ. ಕಳೆದ ವಾರ ಚಂದನ್ ಮಿತ್ರಾ ಪಕ್ಷ ತೊರೆದ ಹಿನ್ನೆಲೆಯಲ್ಲಿ ಒಂದು ಸ್ಥಾನ ಖಾಲಿ ಇದೆ. ಅಂದರೆ ಒಟ್ಟು ಶೇ. 69ರಷ್ಟು ಮಂದಿ ಮೇಲ್ವರ್ಗದವರು, ಇತರ ಸಮುದಾಯದವರು ಶೇ. 27ರಷ್ಟು ಮಂದಿ ಮಾತ್ರ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಅಧ್ಯಕ್ಷರ ಪೈಕಿ ಯಾರೂ ದಲಿತರಿಲ್ಲ. ಏಳು ಮಂದಿ ಬ್ರಾಹ್ಮಣರು, 17 ಮಂದಿ ಇತರ ಮೇಲ್ವರ್ಗದವರು, ಆರು ಮಂದಿ ಪರಿಶಿಷ್ಟ ಪಂಗಡದವರು, ಐದು ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಮತ್ತು ಒಬ್ಬ ಮುಸ್ಲಿಂ. ಅಂದರೆ ಮೇಲ್ವರ್ಗದವರು ಶೇ. 66ರಷ್ಟು ಮಂದಿ ಇದ್ದಾರೆ. ಜಿಲ್ಲಾಮಟ್ಟದಲ್ಲಿ ಕೂಡಾ ಪಕ್ಷದ ಅಧ್ಯಕ್ಷರಲ್ಲಿ ಶೇ. 65ರಷ್ಟು ಮಂದಿ ಮೇಲ್ವರ್ಗದವರು.

ಇವರಲ್ಲಿ ಶೇ. 25ರಷ್ಟು ಮಂದಿ ಬ್ರಾಹ್ಮಣರು. ಬಿಜೆಪಿಯ 752 ಮಂದಿ ಜಿಲ್ಲಾ ಅಧ್ಯಕ್ಷರ ಪೈಕಿ 746 ಮಂದಿಯ ಮಾಹಿತಿಯಷ್ಟೇ ಲಭ್ಯವಾಗಿದೆ. ಮೂರು ಸ್ಥಾನಗಳು ಖಾಲಿ ಇದ್ದು, ಮೂವರು ಜಿಲ್ಲಾ ಅಧ್ಯಕ್ಷರ ಜಾತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಈ ಪೈಕಿ 487 ಮಂದಿ ಮೇಲ್ವರ್ಗದವರು. ಶೇ. 25ರಷ್ಟು ಮಂದಿ ಇತರ ಹಿಂದುಳಿದ ವರ್ಗದವರು. ಪರಿಶಿಷ್ಟರ ಪ್ರಮಾಣ ಶೇ. 4ಕ್ಕಿಂತ ಕಡಿಮೆ. ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಶೇ. 2ಕ್ಕಿಂತಲೂ ಕಡಿಮೆ.ಯಾವುದೂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿಲ್ಲ.

2011ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಶೇ. 16.6ರಷ್ಟು ದಲಿತರು ಮತ್ತು ಶೇ. 8.6ರಷ್ಟು ಪರಿಶಿಷ್ಟ ಪಂಗಡದವರು. ಮುಸ್ಲಿಮರ ಪಾಲು ಶೇ. 14ರಷ್ಟು. ಜಾತಿಗಣತಿಯ ಅಂಕಿ ಅಂಶ ಇನ್ನೂ ಬಿಡುಗಡೆಯಾಗಬೇಕಿರುವುದರಿಂದ ಇತರ ಜಾತಿಗಳ ಬಗ್ಗೆ ನಿಖರ ಅಂಕಿ ಅಂಶ ಇಲ್ಲ. ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಸಂಸ್ಥೆ (ಎನ್‌ಎಸ್‌ಎಸ್‌ಓ) 2007ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಇತರ ಹಿಂದುಳಿದ ವರ್ಗದವರ ಪ್ರಮಾಣ ಶೇ. 41ರಷ್ಟಾಗಿದೆ.

ರಾಜ್ಯಗಳಲ್ಲೂ ಅದೇ ಸ್ಥಿತಿ
2017ರಲ್ಲಿ ಜಾತಿ ಸಮೀಕರಣದೊಂದಿಗೆ ಭಾರೀ ಬಹುಮತ ಸಾಧಿಸಿ ಬಿಜೆಪಿ ಅಧಿಕಾರ ಸೂತ್ರ ಹಿಡಿದ ಉತ್ತರ ಪ್ರದೇಶದಲ್ಲಿ ಕೂಡಾ ಮೇಲ್ವರ್ಗದವರ ಪ್ರಭಾವ ಅತ್ಯಧಿಕ. ಜಿಲ್ಲಾ ಘಟಕಗಳಲ್ಲಿ ಶೇ. 72ರಷ್ಟು ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು. ಅದರಲ್ಲೂ ಶೇ. 30ರಷ್ಟು ಬ್ರಾಹ್ಮಣರು, ಶೇ. 15ರಷ್ಟು ಬನಿಯಾಗಳು ಹಾಗೂ ಶೇ. 26ರಷ್ಟು ಇತರ ಮುಂದುವರಿದ ವರ್ಗಗಳಿಗೆ ಸೇರಿದವರು. ರಾಜ್ಯದಲ್ಲಿ ದಲಿತ ಜನಸಂಖ್ಯೆ ಶೇ. 21ರಷ್ಟಿದ್ದರೆ, ಜಿಲ್ಲಾ ಅಧ್ಯಕ್ಷರ ಪೈಕಿ ಇಬ್ಬರು ಮಾತ್ರ ದಲಿತರು. ಜಿಲ್ಲಾಧ್ಯಕ್ಷರ ಪೈಕಿ ಶೇ. 26ರಷ್ಟು ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು. ಉತ್ತರ ಪ್ರದೇಶದಲ್ಲಿ 71 ಜಿಲ್ಲೆಗಳಿದ್ದು, ಆಡಳಿತಾತ್ಮಕ ಕಾರಣಗಳಿಗೆ ಪಕ್ಷ ಕೆಲವನ್ನು ವಿಭಜಿಸಿರುವುದರಿಂದ ಒಟ್ಟು 91 ಮಂದಿ ಜಿಲ್ಲಾಧ್ಯಕ್ಷರು ಇದ್ದಾರೆ.

2019ರಲ್ಲಿ ಬಿಜೆಪಿ ಕಣ್ಣಿಟ್ಟಿರುವ ಮತ್ತೊಂದು ಪ್ರಮುಖ ರಾಜ್ಯ ಬಿಹಾರ. ರಾಜ್ಯದ 20 ಜಿಲ್ಲಾಧ್ಯಕ್ಷರ ಪೈಕಿ ಆರು ಮಂದಿ ಬ್ರಾಹ್ಮಣರು, 16 ಮಂದಿ ಇತರ ಮೇಲ್ವರ್ಗದವರು. 11 ಮಂದಿ ಹಿಂದುಳಿದವರ್ಗದವರು ಮತ್ತು ಒಬ್ಬರು ಪರಿಶಿಷ್ಟರು. ರಾಜ್ಯದಲ್ಲಿ ದಲಿತ ಅಧ್ಯಕ್ಷರಿಲ್ಲ. ಅಂದರೆ ಶೇ. 55ರಷ್ಟು ಪಾಲು ಮೇಲ್ವರ್ಗದವರದ್ದು ಹಾಗೂ ಶೇ. 11ರಷ್ಟು ಪಾಲು ಇತರ ಹಿಂದುಳಿದ ವರ್ಗಗಳದ್ದು.

ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ ಮೂರು ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಸೆಮಿಫೈನಲ್ ಕದನಕ್ಕೆ ಬಿಜೆಪಿ ಸಜ್ಜಾಗುತ್ತಿದೆ. ಈ ಮೂರು ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿದೆ.

ಮಧ್ಯಪ್ರದೇಶದ ಜಿಲ್ಲಾಧ್ಯಕ್ಷರ ಪೈಕಿ ಶೇ. 70ರಷ್ಟು ಮಂದಿ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಸೇರಿದವರು. ಇತರ ಹಿಂದುಳಿದ ವರ್ಗದವರ ಪಾಲು ಶೇ. 25 ಆಗಿದ್ದರೆ, ಪರಿಶಿಷ್ಟ ಪಂಗಡದವರು ಶೇ. 4ರಷ್ಟು. 55 ಜಿಲ್ಲಾಧ್ಯಕ್ಷರ ಪೈಕಿ 13 ಮಂದಿ ಬನಿಯಾಗಳು, 6 ಮಂದಿ ಬ್ರಾಹ್ಮಣರು ಹಾಗೂ ಒಬ್ಬರು ಸಿಖ್ ಸಮುದಾಯಕ್ಕೆ ಸೇರಿದವರು.

ರಾಜಸ್ಥಾನದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಎರಡು ಲೋಕಸಭಾ ಸ್ಥಾನಗಳ ಉಪಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋತಿದೆ. ಇಲ್ಲಿನ ಜಿಲ್ಲಾಧ್ಯಕ್ಷರ ಪೈಕಿ ಬ್ರಾಹ್ಮಣರು, ಬನಿಯಾಗಳು, ಜೈನರು, ರಜಪೂತರು ಮತ್ತು ಕ್ಷತ್ರಿಯರು ಶೇ. 71ರಷ್ಟು ಮಂದಿ. ಶೇ. 23 ಮಂದಿ ಇತರ ಹಿಂದುಳಿದ ವರ್ಗಗಳಗೆ ಸೇರಿದವರು ಮತ್ತು ಇಬ್ಬರು ಪರಿಶಿಷ್ಟ ಜಾತಿಯವರು.

ಚುನಾವಣೆ ನಡೆಯುವ ಮೂರನೇ ರಾಜ್ಯವಾದ ಛತ್ತೀಸ್‌ಗಡದಲ್ಲಿ, ಪಕ್ಷದ ಜಿಲ್ಲಾಧ್ಯಕ್ಷರಲ್ಲಿ ಸಿಂಹಪಾಲು ಇತರ ಹಿಂದುಳಿದ ವರ್ಗದವರದ್ದು. ಅಂದರೆ ಒಟ್ಟು ಶೇ. 45 ರಷ್ಟು ಜಿಲ್ಲಾಧ್ಯಕ್ಷರು ಇತರ ಹಿಂದುಳಿದವರ್ಗದವರಾದರೆ, ಶೇ. 41ರಷ್ಟು ಮಂದಿ ಮೇಲ್ವರ್ಗದವರೂ ಇದ್ದಾರೆ. ಬ್ರಾಹ್ಮಣರು ಶೇ. 3, ಬನಿಯಾಗಳು ಶೇ. 17 ಮತ್ತು ಇತರ ಹಿಂದುಳಿದ ವರ್ಗದವರು ಶೇ. 21ರಷ್ಟು ಮಂದಿ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಶೇ. 7ರಷ್ಟು ಮಾತ್ರ.

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಒಟ್ಟು 41 ಜಿಲ್ಲಾಧ್ಯಕ್ಷರ ಪೈಕಿ ಮೂವರು ಬ್ರಾಹ್ಮಣರು, 21 ಮಂದಿ ಇತರ ಮೇಲ್ವರ್ಗದವರು. ಆರು ಮಂದಿ ಬುಡಕಟ್ಟು ಜನಾಂಗದವರಿದ್ದರೆ, ಇತರ ಹಿಂದುಳಿದ ವರ್ಗದವರ ಸಂಖ್ಯೆ ಎಂಟು. ಮೂವರು ಪರಿಶಿಷ್ಟರೂ ಜಿಲ್ಲಾಧ್ಯಕ್ಷರಾಗಿದ್ದಾರೆ. ಮೀಸಲಾತಿಗೆ ಹೋರಾಡುತ್ತಿರುವ ಪಟೇಲ್ ಸಮುದಾಯಕ್ಕೆ ಸೇರಿದವರು ಒಟ್ಟು ಜಿಲ್ಲಾಧ್ಯಕ್ಷರ ಪೈಕಿ ಶೇ. 31ರಷ್ಟಿದ್ದಾರೆ.
ನೆರೆಯ ಮಹಾರಾಷ್ಟ್ರದ 40 ಜಿಲ್ಲಾ ಅಧ್ಯಕ್ಷರ ಪೈಕಿ, ಮೀಸಲಾತಿ ಆಗ್ರಹ ಮುಂದಿಟ್ಟಿರುವ ಪ್ರಬಲ ಮರಾಠಿ ಜನಾಂಗದ 15 ಮಂದಿ ಇದ್ದಾರೆ. ಇವರ ಪ್ರಾತಿನಿಧ್ಯ ಗರಿಷ್ಠ. ಉಳಿದವರಲ್ಲಿ 11 ಮಂದಿ ಬ್ರಾಹ್ಮಣರು, ಆರು ಮಂದಿ ಇತರ ಮುಂದುವರಿದ ವರ್ಗದವರು, ಹಿಂದುಳಿದ ವರ್ಗಕ್ಕೆ ಸೇರಿದ ನಾಲ್ಕು ಮಂದಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂವರು ಹಾಗೂ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ತಲಾ ಒಬ್ಬರು ಜಿಲ್ಲಾಧ್ಯಕ್ಷರಾಗಿದ್ದಾರೆ.

ಪೂರ್ವ
ಪೂರ್ವದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ 37 ಜಿಲ್ಲಾಧ್ಯಕ್ಷ ಹುದ್ದೆಗಳಿವೆ. ಇದರಲ್ಲಿ ಇಬ್ಬರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಐದು ಮಂದಿ ಇತರ ಹಿಂದುಳಿದ ವರ್ಗದವರು. ಉಳಿದೆಲ್ಲರೂ ಸಾಮಾನ್ಯ ವರ್ಗದವರು. ಬಿಜೆಪಿ ಸರಕಾರವಿರುವ ಅಸ್ಸಾಂನಲ್ಲಿ ಶೇ. 45ರಷ್ಟು ಜಿಲ್ಲಾಧ್ಯಕ್ಷರು ಬ್ರಾಹ್ಮಣರು ಅಥವಾ ಇತರ ಮೇಲ್ವರ್ಗಕ್ಕೆ ಸೇರಿದವರು. ಶೇ. 31ರಷ್ಟು ಮಂದಿ ಇತರ ಹಿಂದುಳಿದ ವರ್ಗ ಮತ್ತು ಶೇ. 21ರಷ್ಟು ಪರಿಶಿಷ್ಟ ಪಂಗಡದವರು. ಮುಸ್ಲಿಂ ಅಧ್ಯಕ್ಷ ಒಬ್ಬರು ಮಾತ್ರ.

ಉತ್ತರ- ದಕ್ಷಿಣ
ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದ 36 ಜಿಲ್ಲಾಧ್ಯಕ್ಷ ಹುದ್ದೆಗಳ ಪೈಕಿ 28 ಹುದ್ದೆಗಳು ಸಾಮಾನ್ಯ ವರ್ಗದ ವಶದಲ್ಲಿವೆ. 19 ಮಂದಿ ಲಿಂಗಾಯತರು, ಏಳುಮಂದಿ ಒಕ್ಕಲಿಗರು, ಇಬ್ಬರು ಇತರ ಸಾಮಾನ್ಯ ವರ್ಗದವರು, ಐದು ಮಂದಿ ಹಿಂದುಳಿದ ವರ್ಗದವರು ಮತ್ತು ಮೂವರು ಪರಿಶಿಷ್ಟರು. ಎಐಎಡಿಎಂಕೆ ಜತೆಗೆ ಮೈತ್ರಿಯನ್ನು ಎದುರು ನೋಡುತ್ತಿರುವ ತಮಿಳುನಾಡಿನಲ್ಲಿ, ಶೇ. 71ರಷ್ಟು ಮಂದಿ ಜಿಲ್ಲಾಧ್ಯಕ್ಷರು ಇತರ ಹಿಂದುಳಿದ ವರ್ಗದವರು. ಶೇ. 26ರಷ್ಟು ಮಂದಿ ಮೇಲ್ವರ್ಗದವರಾಗಿದ್ದರೆ, ಪರಿಶಿಷ್ಟರ ಪ್ರಾತಿನಿಧ್ಯ ಶೂನ್ಯ.

ವಾಯವ್ಯ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ 23 ಜಿಲ್ಲಾಧ್ಯಕ್ಷರ ಪೈಕಿ ಶೇ. 43ರಷ್ಟು ಮಂದಿ ಮೇಲ್ವರ್ಗದವರಿದ್ದು, ಬಹುತೇಕ ಮಂದಿ ಜಮ್ಮು ಪ್ರದೇಶದಲ್ಲಿದ್ದಾರೆ. ಶೇ. 48 ಹುದ್ದೆಗಳು ಮುಸ್ಲಿಮರ ವಶದಲ್ಲಿದ್ದು, ಇವು ಬಹುತೇಕ ಕಾಶ್ಮೀರ ಕಣಿವೆ ಪ್ರದೇಶದ ಹುದ್ದೆಗಳು.
ಪ್ರಧಾನಿಯೇ ಹಿಂದುಳಿದ ವರ್ಗದವರ ಬಗ್ಗೆ ಬಿಜೆಪಿ ಮುಖಂಡರ ಅಭಿಪ್ರಾಯ ಕೇಳಿದಾಗ, ಈ ವಿಷಯದ ಬಗ್ಗೆ ಅಧಿಕೃತವಾಗಿ ಮಾತನಾಡಲು ನಿರಾಕರಿಸಿದರು. ಆದರೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಪಕ್ಷ ಸ್ಥಳೀಯ ಜಾತಿ ಸಮೀಕರಣವನ್ನು ಪರಿಗಣಿಸಿದೆ ಎಂದು ಮೂಲಗಳು ಹೇಳಿವೆ.

‘‘ಸಾಮಾನ್ಯವಾಗಿ ಸಮತೋಲನ ಮಾಡುವ ಪ್ರಯತ್ನ ನಡೆಯುತ್ತದೆ. ಈ ವೇಳೆ, ಭಿನ್ನ ಪ್ರಬಲ ಗುಂಪುಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಇದೇ ಮಾನದಂಡ ನಗರ ಹಾಗೂ ಗ್ರಾಮ ಘಟಕಗಳ ಅಧ್ಯಕ್ಷ ಹುದ್ದೆಗಳಿಗೂ ಅನ್ವಯಿಸುತ್ತದೆ’’ ಎಂದು ಮೂಲಗಳು ಹೇಳಿವೆ.

‘‘ಪ್ರಧಾನಿ ಹಿಂದುಳಿದ ವರ್ಗಕ್ಕೆ ಸೇರಿದವರು. ನಮ್ಮದು ಹಿಂದುಳಿದ ವರ್ಗದವರ ಪಕ್ಷ ಎನ್ನುವುದನ್ನು ಇದೇ ಸೂಚಿಸುತ್ತದೆ. ಬದಲಾವಣೆ ನಿಧಾನವಾಗಿ ನಡೆಯುತ್ತದೆ. ಇದು ಪಕ್ಷದ ಶ್ರೇಣಿವ್ಯವಸ್ಥೆಯಲ್ಲೂ ಪ್ರತಿಫಲಿಸುತ್ತದೆ. ರಾತ್ರೋರಾತ್ರಿ ಇದು ಆಗಲು ಸಾಧ್ಯವಿಲ್ಲ’’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮತ್ತೊಬ್ಬ ಹಿರಿಯ ಮುಖಂಡ ನುಡಿದರು.

Writer - ಕೃಪೆ: ‘ದ ಪ್ರಿಂಟ್’

contributor

Editor - ಕೃಪೆ: ‘ದ ಪ್ರಿಂಟ್’

contributor

Similar News