ದಿನವೊಂದಕ್ಕೆ ಒಂದು ಸಾವಿರ ರೂ. ಬಡ್ಡಿರಹಿತ ಸಾಲ: ಸಿ.ಎಂ ಕುಮಾರಸ್ವಾಮಿ
ಬೆಂಗಳೂರು, ಆ.25: ಸಮಾಜದಲ್ಲಿರುವ ಬಡ್ಡಿ ದಂದೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರಕಾರದಿಂದಲೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಮಾಡಿ ಬಡವರಿಗೆ ದಿನವೊಂದಕ್ಕೆ ಒಂದು ಸಾವಿರ ರೂ. ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಉತ್ತರಹಳ್ಳಿ ಮುಖ್ಯರಸ್ತೆ, ತುರಹಳ್ಳಿಯಲ್ಲಿರುವ ಆದಿ ಚುಂಚನಗಿರಿ ಮಠದ ಆವರಣದಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಇರುವಷ್ಟು ದಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಶೈಕ್ಷಣಿಕ ಸಾಲ ಕಾನೂನು ಜಾರಿಗೆ ತಂದಿದ್ದೇವೆ. ಆದರೆ, ಬ್ಯಾಂಕುಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಸಾಲ ನೀಡುತ್ತಿಲ್ಲ. ಇದರಲ್ಲೂ ಬದಲಾವಣೆ ತಂದು, ವಿದ್ಯಾರ್ಥಿಗಳಿಗೆ ಅಗತ್ಯ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಸಮ್ಮಿಶ್ರ ಸರಕಾರ ಇದೇ ತಿಂಗಳು 100 ದಿನ ಪೂರೈಸುತ್ತಿದೆ. ಅಧಿಕಾರಿಗಳು ಇಲ್ಲಿಯವರೆಗೂ ಏನು ಮಾಡಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ಮುಂದಾದರು ಜಾತಿ ರಾಜಕೀಯ, ಗುಂಪು ರಾಜಕೀಯ ಬಿಟ್ಟು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲವಾದರೆ, ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಅವರು ಚಾಟಿ ಬೀಸಿದರು.
ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸಿ ಆಡಳಿತವನ್ನು ಬಿಗಿ ಮಾಡದೇ ಇದ್ದರೆ ಐದು ವರ್ಷಗಳ ಕಾಲ ನಾನು ಸಿಎಂ ಆಗಿದ್ದರೂ ಏನು ಪ್ರಯೋಜನ. ಆಡಳಿತದಲ್ಲಿ ಹಲವಾರು ಜನರು ಜಾತಿವಾರು ಪ್ರಭಾವ ಬಳಸಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕಾಗಿದೆ. ಎಲ್ಲ ವರ್ಗದ ಬಡವರು ಉಳಿಯಬೇಕು. ಅದಕ್ಕಾಗಿ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಪ್ರತಿಯೊಂದಕ್ಕೂ ನಾನು ಕೇಂದ್ರದ ಕಡೆಗೆ ಕೈ ಚಾಚಲ್ಲ. ರಾಜ್ಯದ ಜನ ಕೊಡುವ ತೆರಿಗೆ ಹಣದಲ್ಲೇ ಪ್ರಾಮಾಣಿಕವಾದ ಆಡಳಿತ ಮಾಡುತ್ತೇನೆ. ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ನಾನು ಯಾವ ತಂತ್ರವನ್ನೂ ಮಾಡಲ್ಲ. ನನ್ನ ಸಿಎಂ ಪಟ್ಟದಿಂದ ಇಳಿಸಲು ಯಾರು ಕಾಯುತ್ತಿದ್ದಾರೋ ಅವರು ಅರ್ಥ ಮಾಡಿಕೊಳ್ಳಬೇಕೆಂದು ಅವರು ಕಿಡಿಕಾರಿದರು.
ಶನಿವಾರ ಮಾತ್ರ ಸಂದರ್ಶನ
ಪ್ರತಿ ದಿನ ಸಾವಿರಾರು ಮಂದಿ ಸಮಸ್ಯೆ ಹೇಳಿಕೊಂಡು ನನ್ನ ಮನೆಗೆ ಬರುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಪ್ರತಿ ಶನಿವಾರ ಜನತಾದರ್ಶನ ಮಾಡುತ್ತೇನೆ. ಇಡೀ ದಿನ ಬೆಳಗ್ಗಿನಿಂದ ಸಂಜೆವರೆಗೂ ಜನತೆಯ ಸಮಸ್ಯೆ ಆಲಿಸುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ