​ಶೂಟಿಂಗ್ ಚಾಂಪಿಯನ್ ಸೃಷ್ಟಿಯಾದದ್ದು ತಗಡು ಛಾವಣಿ ಕೊಠಡಿಯಲ್ಲಿ !

Update: 2018-08-26 04:03 GMT

ಲಕ್ನೋ, ಆ. 26: ಪಶ್ಚಿಮ ಉತ್ತರ ಪ್ರದೇಶದ ಪುಟ್ಟ ಪಟ್ಟಣವಾದ ಬಾಗ್‌ಪತ್‌ನ 15 ಅಡಿ ಉದ್ದ 12 ಅಡಿ ಅಗಲದ ಪುಟ್ಟ ರೈಫಲ್ ಕ್ಲಬ್ ಚಾಂಪಿಯನ್‌ಗಳನ್ನು ಸೃಷ್ಟಿಸುವ ಮೂಲಕ ಗಮನ ಸೆಳೆದಿದೆ. ಚಾಂಪಿಯನ್‌ಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಸೌರಭ್ ಚೌಧರಿ.

ಈ ಪುಟ್ಟ ಕೊಠಡಿಯಲ್ಲಿ ದೂಳು ಸೇವಿಸುತ್ತಾ ತಮ್ಮ ಸರದಿಗಾಗಿ ಚಾಂಪಿಯನ್‌ಗಳು ಕಾಯುತ್ತಾರೆ. ಕೆಲವೊಮ್ಮೆ ಪಕ್ಕದ ಮರದಲ್ಲಿ ಕುಳಿತ ಕೋತಿಗಳು ಇವರ ಟಿಫನ್ ಬಾಕ್ಸ್ ಕದಿಯುತ್ತವೆ. ಏಷ್ಯನ್ ಗೇಮ್ಸ್‌ನಲ್ಲಿ 10 ಮೀಟರ್ ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸೌರಭ್ ಚೌಧರಿ ಶೂಟಿಂಗ್ ಆರಂಭಿಸಿದ್ದು, 2015ರ ಚಳಿಗಾಲದಲ್ಲಿ; ಅದೂ ಇಂಥ ಪ್ರತಿಕೂಲ ವಾತಾವರಣದಲ್ಲಿ.

ಮಾಜಿ ಶೂಟರ್ ಅಮಿತ್ ಶೆರೋನ್ (40) ಬಾಗ್‌ಪಥ್ ಜಿಲ್ಲೆಯ ಬಿನೌಲಿಯಲ್ಲಿ ವೀರ ಶಾಮಲ್ ರೈಫಲ್ ಕ್ಲಬ್ ನಡೆಸುತ್ತಾರೆ. "ಇಲ್ಲಿ ಫ್ಯಾನ್‌ಗಳಿಲ್ಲ. ಇತರ ಮಕ್ಕಳು ಅಸಾಧ್ಯ ಬೇಗೆ ತಾಳಲಾರದೆ ಮಧ್ಯಾಹ್ನದ ಬಳಿಕ ಅಭ್ಯಾಸ ನಿಲ್ಲಿಸುತ್ತಿದ್ದರು. ಆದರೆ ಸೌರಭ್ ಹಾಗೆ ಮಾಡಲಿಲ್ಲ. ಆಗ 13 ವರ್ಷದವನಾಗಿದ್ದ ಸೌರಭ್ ಬೆವರು ಹರಿಸುತ್ತಲೇ ಶೂಟಿಂಗ್ ಅಭ್ಯಾಸ ಮಾಡಿದ್ದರು. ಆತನ ದೃಷ್ಟಿ ಸದಾ ಗುರಿಯೆಡೆಗೆ. ಆತ ಒಬ್ಬ ಸನ್ಯಾಸಿ" ಎಂದು ಅವರು ಹೇಳುತ್ತಾರೆ.

2016ರಲ್ಲಿ ವಿದ್ಯಾರ್ಥಿಯೊಬ್ಬರ ತಂದೆ ಚಿಕ್ಕ ನಿವೇಶನ ದಾನವಾಗಿ ಕೊಟ್ಟಿದ್ದರಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ರೈಫಲ್ ಕ್ಲಬ್ ಎರಡು ಫ್ಯಾನ್‌ಗಳೊಂದಿಗೆ ನಡೆಯುತ್ತಿದೆ. ಇದು ದೊಡ್ಡ ಸಾಧನೆಯೇನೂ ಅಲ್ಲ. ಆದರೆ 26 ಮಂದಿ ಕನಸು ಕಾಣುವ ಥಿಯೇಟರ್ ಹಾಗೂ ಪ್ರಗತಿಯ ಮಾರ್ಗವನ್ನು ಬೋಧಿಸುವ ಶಾಲೆ. ಬಹುತೇಕ ಮಂದಿ ಸಣ್ಣ ರೈತರ ಮಕ್ಕಳು. ಒಬ್ಬ ಮೇಸ್ತ್ರಿಯ ಮಗ. ಮುಸ್ಲಿಂ, ಜಾಟ್ ಹಾಗೂ ಇತರ ಹಿಂದುಳಿದವರ್ಗದವರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇಲ್ಲಿ ತರಬೇತಿ ಪಡೆಯುವ ಬಹುತೇಕ ಮಂದಿ ಸೌರಭ್‌ಗಿಂತಲೂ ಕಿರಿಯರು. ಅಕ್ಕಪಕ್ಕದ ಗ್ರಾಮದವರು. ಕಲಿನಾ, ಆದಂಪುರ, ಬಾಲಿ, ರಝಾಪುರ, ಕ್ಷೀರಸಾಗರ, ಹಿಸ್ಸಾವಾಡದ 12-14 ಮಂದಿ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಮುಜಾಫರ್‌ನಗರದ ಮುಹಮ್ಮದ್ ವಸೀಂ, ಅಮ್ರೋಹಾದ ವಿಶಾಲ್ ಪನ್ನು ಕೂಡಾ ಬಾಡಿಗೆ ಕೊಠಡಿಯಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. "ನಮ್ಮ ಗುರಿ ಒಲಿಂಪಿಕ್ಸ್" ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News