ಈಕ್ವೆಸ್ಟ್ರಿಯನ್ ನಲ್ಲಿ ಭಾರತಕ್ಕೆ ಎರಡು ಬೆಳ್ಳಿ, ಇತಿಹಾಸ ನಿರ್ಮಿಸಿದ ಮಿರ್ಝಾ

Update: 2018-08-26 18:39 GMT

ಜಕಾರ್ತ, ಆ.26: ಏಶ್ಯನ್ ಗೇಮ್ಸ್‌ನ ಕುದುರೆ ಸವಾರಿ (ಈಕ್ವೆಸ್ಟ್ರಿಯನ್) ಸ್ಪರ್ಧೆಯಲ್ಲಿ ಭಾರತದ ಫವಾದ್ ಮಿರ್ಝಾ ಬೆಳ್ಳಿ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

     ವೈಯಕ್ತಿಕ ವಿಭಾಗದಲ್ಲಿ ಮತ್ತು ತಂಡ ವಿಭಾಗದಲ್ಲಿ ಎರಡು ಬೆಳ್ಳಿ ಪದಕಗಳು ಭಾರತದ ಖಾತೆಗೆ ಇಂದು ಜಮೆ ಆಗಿವೆೆ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಮಿರ್ಝಾ 26.40 ಪೆನಾಲ್ಟಿ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದೊಂದಿಗೆ ಬೆಳ್ಳಿಗೆ ಕೊರಳೊಡ್ಡಿದರು. ಜಪಾನ್‌ನ ಒವ್ವಾ ಯೋಶಿಕಿ (22.70) ಚಿನ್ನ ಮತ್ತು ಚೀನಾದ ಹುವಾ ಟಿಯಾನ್ ಅಲೆಕ್ಸ್ (27.10) ಮೂರನೇ ಸ್ಥಾನದೊಂದಿಗೆ ಕಂಚು ಪಡೆದರು.

  ಕುದುರೆ ಸವಾರಿ ತಂಡದ ವಿಭಾಗದಲ್ಲಿ ಭಾರತದ ಫವಾದ್ ಮಿರ್ಝಾ, ಜಿತೇಂದರ್ ಸಿಂಗ್, ಆಕಾಶ್ ಮಲಿಕ್ ಮತ್ತು ರಾಕೇಶ್‌ರನ್ನೊಳಗೊಂಡ ಭಾರತ ತಂಡ 121.30 ಪೆನಾಲ್ಟಿ ಪಾಯಿಂಟ್ಸ್ ದಾಖಲಿಸಿ ಎರಡನೇ ಸ್ಥಾನದೊಂದಿಗೆ ರಜತ ಗೆದ್ದುಕೊಂಡಿತು.

 ಜಪಾನ್ (82.40) ಚಿನ್ನ ಮತ್ತು ಥಾಯ್ಲೆಂಡ್(126.76) ಕಂಚು ಪಡೆಯಿತು.

ವೈಯಕ್ತಿಕ ವಿಭಾಗದಲ್ಲಿ ಫವಾದ್ ಅರ್ಹತಾ ಸುತ್ತಿನಲ್ಲಿ 22.40 ಸ್ಕೋರ್ ದಾಖಲಿಸಿ ಮೊದಲ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು. ಆದರೆ ಫೈನಲ್‌ನಲ್ಲಿ ಅವರಿಗೆ ಮೊದಲ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜರ್ಮನಿಯ ಒಲಿಂಪಿಯನ್ ಬೆಟ್ಟಿನಾ ಹೊಯ್ ಅವರ ಬಳಿ ತರಬೇತಿ ಪಡೆದಿರುವ ಫವಾದ್ ಕಳೆದ ವರ್ಷ ಯುರೋಪ್‌ನಲ್ಲಿ ಜಯ ಗಳಿಸಿದ್ದ ಭಾರತದ ಮೊದಲ ಕುದುರೆ ಸವಾರ ಎನಿಸಿಕೊಂಡಿದ್ದರು. ಇಟಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಫವಾದ್ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದರು. ಏಶ್ಯನ್ ಗೇಮ್ಸ್‌ನಲ್ಲಿ ಸ್ಪರ್ಧೆ ಆರಂಭಗೊಳ್ಳುವ ಮುನ್ನಾ ದಿನ ಭಾರತದ ಈಕ್ವೆಸ್ಟ್ರಿಯನ್ ತಂಡಕ್ಕೆ ಮಾನ್ಯತೆ ಸಿಕ್ಕಿತ್ತು. ಭಾರತ ಈ ಮೊದಲು ಏಶ್ಯನ್ ಗೇಮ್ಸ್ ನ ಈಕ್ವೆಸ್ಟ್ರಿಯನ್‌ನಲ್ಲಿ 3 ಚಿನ್ನ , 1 ಬೆಳ್ಳಿ 6 ಕಂಚು ಸೇರಿದಂತೆ 10 ಪದಕಗಳನ್ನು ಗಳಿಸಿತ್ತು. 1982ರ ಏಶ್ಯನ್ ಗೇಮ್ಸ್‌ನ ವೈಯಕ್ತಿಕ ವಿಭಾಗದಲ್ಲಿ ರಘುಬೀರ್ ಸಿಂಗ್ ಚಿನ್ನ ಗೆದ್ದುಕೊಂಡಿದ್ದರು. 36 ವರ್ಷಗಳ ಬಳಿಕ ಮತ್ತೆ ಫವಾದ್ ಮೂಲಕ ಭಾರತದ ಖಾತೆಗೆ ಬೆಳ್ಳಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News