ಸೈನಾ ಸೆಮಿಫೈನಲ್ ಗೆ

Update: 2018-08-26 18:36 GMT

ಜಕಾರ್ತ, ಆ.26: ಏಶ್ಯನ್ ಗೇಮ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಪದಕ ದೊರೆಯುವುದು ಖಚಿತವಾಗಿದೆ.

 ಸೈನಾ ನೆಹ್ವಾಲ್ ಅವರು ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.5 ಆಟಗಾರ್ತಿ ರಚನಾಕ್ ಇಂತನಾನ್‌ರನ್ನು 21-18, 21-16 ನೇರ ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.

ಥಾಯ್ಲೆಂಡ್‌ನ ಆಟಗಾರ್ತಿ ಇಂತನಾನ್ ವಿರುದ್ಧ ಸೈನಾ ಮೊದಲ ಗೇಮ್‌ನಲ್ಲಿ 3-8 ಹಿನ್ನಡೆ ಅನುಭವಿಸಿದ್ದರು. ಬಳಿಕ ತಿರುಗೇಟು ನೀಡಿದ ಸೈನಾ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು.

ಇವರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ 42 ನಿಮಿಷಗಳಲ್ಲಿ ಕೊನೆಗೊಂಡಿತು.

ಭಾರತ ಏಶ್ಯನ್ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪದಕದ ಬರ ಎದುರಿಸುತ್ತಿದ್ದು, ಈ ವರೆಗೆ ಯಾರಿಗೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಸೈನಾ ನೆಹ್ವಾಲ್ ಪದಕದ ಭರವಸೆ ಮೂಡಿಸಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸೈಯದ್ ಮೋದಿ 1982ರ ಏಶ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಪಡೆದಿದ್ದರು. ಇದು ಏಶ್ಯನ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಸಿಕ್ಕಿರುವ ಮೊದಲ ಪದಕವಾಗಿದೆ.

  ಸೈನಾ ಅವರು ರಚನಾಕ್‌ಗೆ ಸತತ ಮೂರು ಪಂದ್ಯಗಳಲ್ಲಿ ಸೋಲುಣಿಸಿದ್ದಾರೆ. ಕಳೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತು ಇಂಡೋನೇಶ್ಯನ್ ಮಾಸ್ಟರ್ಸ್‌ನಲ್ಲಿ ಸೈನಾ ಅವರು ರಚನಾಕ್ ವಿರುದ್ಧ ಜಯ ಗಳಿಸಿದ್ದರು. ಸೈನಾ ಅವರು ಇಂತನಾನ್‌ರನ್ನು ಎದುರಿಸಿದ ಕಳೆದ 5 ಪಂದ್ಯಗಳಲ್ಲಿ 4ನೇ ಜಯ ದಾಖಲಿಸಿದ್ದಾರೆ.

  ಸೆಮಿಫೈನಲ್‌ನಲ್ಲಿ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ಅವರನ್ನು ಎದುರಿಸುವರು. ತೈ ಝು ಯಿಂಗ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಗ್ಲಾಸ್ಗೋ ವಿಶ್ವ ಚಾಂಪಿಯನ್ ನೊನೊಮಿ ಒಕುಹರಾರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸಿಂಧು ಸೆಮಿಫೈನಲ್‌ಗೆ

ವಿಶ್ವದ ನಂ.3 ಆಟಗಾರ್ತಿ ಪಿ.ವಿ.ಸಿಂಧು ಅವರು ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಗ್ರೆಗೊರಿಯಾ ಮಾರಿಸ್ಕಾ ಟುನ್‌ಜುಂಗ್ ವಿರುದ್ಧ 21-12, 21-15 ಅಂತರದಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಇದರೊಂದಿಗೆ ಸಿಂಧು ಅವರು ಭಾರತಕ್ಕೆ ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್ ನಲ್ಲಿ ಪದಕ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News