ಶೋಭಾ ಕರಂದ್ಲಾಜೆ ಬಗ್ಗೆ ಹಗುರವಾಗಿ ಮಾತನಾಡಬೇಡಿ: ದಿನೇಶ್ ಗುಂಡೂರಾವ್ ಗೆ ಯಡಿಯೂರಪ್ಪ ಎಚ್ಚರಿಕೆ

Update: 2018-08-26 11:42 GMT

ಬೆಂಗಳೂರು, ಆ.26: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಿನೇಶ್ ಗುಂಡೂರಾವ್, ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಬದಲು ಕೊಡಗಿನ ಸಂತ್ರಸ್ತರ ಬಗ್ಗೆ ಶೋಭಾ ಕರಂದ್ಲಾಜೆಯವರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.
ಕರಂದ್ಲಾಜೆಯವರು ಯಾವುದೇ ಕಾಂಗ್ರೆಸ್ ನಾಯಕರು ಹೋಗುವುದಕ್ಕಿಂತ ಮೊದಲು ಕೊಡಗಿಗೆ ಹೋಗಿ, ಮೂರು ದಿನ ಅಲ್ಲಿಯೇ ತಂಗಿದ್ದಾರೆ. ಪರಿಹಾರ ಕಾಮಗಾರಿಗಳ ಬಗ್ಗೆ ಮತ್ತು ಹಾನಿ ಕುರಿತು ಪರಿಶೀಲನೆ ಮಾಡಿದ್ದಾರೆ. ಇವೆಲ್ಲವನ್ನೂ ತಿಳಿದುಕೊಂಡು ದಿನೇಶ್ ಗುಂಡೂರಾವ್ ಮಾತನಾಡಬೇಕು ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ಮೋದಿಯವರ ಬಗ್ಗೆ ಅವಲೋಕನ ಮಾಡದೆ, ಬೇಜಾವ್ದಾರಿ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್ ನಾಯಕರ ವೈಚಾರಿಕ ದಿವಾಳಿತವನ್ನು ಎತ್ತಿ ತೋರುತ್ತದೆ ಎಂದ ಅವರು, ರಾಹುಲ್ ಗಾಂಧಿ ವಿದೇಶಗಳಲ್ಲಿ ಐಸಿಸ್ ಉಗ್ರರ, ನೀರವ್ ಮೋದಿ, ವಿಜಯ್ ಮಲ್ಯರೊಂದಿಗೆ ಮೋದಿಗೆ ಸಂಬಂಧ ಇದೆ ಎಂದು ಹೇಳಿಕೆ ಕೊಡುತ್ತಿದ್ದರೆ. ಮತ್ತೊಂದೆಡೆ, ದಿನೇಶ್ ಗುಂಡೂರಾವ್ ಬಿಜೆಪಿ, ಪ್ರಧಾನಿ ಮೋದಿಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

‘ಶೋಭಾ ಷೋ ಮಾಡಿಲ್ಲ’
‘ದಿನೇಶ್ ಗುಂಡೂರಾವ್ ಹೇಳಿದಂತೆ ಸಂತ್ರಸ್ತರ ಜೊತೆ ಶೋಭಾ ಕರಂದ್ಲಾಜೆ ಶೋ ಮಾಡಲು ಊಟ ಬಡಿಸಿಲ್ಲ. ಬದಲಾಗಿ, ಒಂದು ಲಾರಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಪರಿಹಾರ ಕೇಂದ್ರದಲ್ಲಿ ವಿತರಣೆ ಮಾಡಿದ್ದಾರೆ’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News