ನಾನು ಯಾರ ಕಾಲನ್ನು ಎಳೆಯುವುದಿಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2018-08-26 12:02 GMT

ಬೆಂಗಳೂರು, ಆ. 26: ಇನ್ನೂ ಐದು ವರ್ಷಗಳ ಕಾಲ ನಾನು ಯಾರ ಕಾಲನ್ನು ಎಳೆಯುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಐದು ವರ್ಷ ಆಡಳಿತ ನಡೆಸುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾಲ್ಕೂವರೆ ವರ್ಷ ಅವರ ಬೆನ್ನಿಗೆ ನಿಂತು ಬೆಂಬಲ ನೀಡಿದ್ದೆ. ಇದೀಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು, ಅವರಿಗೂ ಬೆಂಬಲ ನೀಡುವೆ ಎಂದರು.

ಮೈತ್ರಿ ಸರಕಾರ ಸಂವಿಧಾನಾತ್ಮಕವಾಗಿ ರಚನೆಯಾಗಿದೆ. ಬೀಳಿಸಿದ ತಕ್ಷಣ ಒಡೆದು ಹೋಗಲು ಅದೇನು ಮಣ್ಣಿನ ಮಡಿಕೆಯಲ್ಲ. ಆದರೂ, ಪ್ರಯತ್ನ ಪಡುತ್ತೇವೆ ಎಂದರೆ ಬಿಜೆಪಿಯ ಸ್ನೇಹಿತರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ.ಶಿವಕುಮಾರ್ ಇಂದಿಲ್ಲಿ ಲೇವಡಿ ಮಾಡಿದರು.

ಬಿಜೆಪಿಯ ಶಾಸಕರ ಸಂಖ್ಯಾಬಲ 104. ಸರಕಾರ ರಚನೆಗೆ 113 ಸ್ಥಾನಗಳ ಬೇಕು. ಶಾಸಕರ ರಾಜೀನಾಮೆ ಕೊಡಿಸಬೇಕು. ಮತ್ತೆ ಅವರು ಚುನಾವಣೆಯಲ್ಲಿ ಗೆದ್ದು ಬರಬೇಕು. ಆ ಮೇಲೆ ಅವಿಶ್ವಾಸ ನಿರ್ಣಯ ತಂದು ಸರಕಾರ ಬೀಳಿಸಬೇಕು. ಅದು ಅಷ್ಟು ಸುಲಭವಲ್ಲ ಎಂದು ಅವರು ಎಚ್ಚರಿಸಿದರು.

ಚುನಾವಣೆ ಮುಗಿದ ತಕ್ಷಣವೇ ಬಿಜೆಪಿ ರಾಷ್ಟ್ರೀಯ ನಾಯಕರು ತರಾತುರಿಯಲ್ಲಿ ಸರಕಾರ ರಚಿಸುವ ಪ್ರಯತ್ನ ಮಾಡಿದ್ದರು. ಸರಕಾರಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ವಿಶ್ವಾಸಮತ ಸಾಬೀತುಪಡಿಸಲು 15ದಿನಗಳ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ, ಕೋರ್ಟ್ ಅವರಿಗೆ ಬುದ್ದಿ ಹೇಳಿತ್ತು. ಬಿಜೆಪಿ ಗೆಳೆಯರು ತಾಳ್ಮೆಯಿಂದ ಇರಬೇಕು. ಆತುರ ಒಳ್ಳೆಯದಲ್ಲ. ನಂಬರ್ ಗೇಮ್ ಆಟದಲ್ಲಿ ಗೆಲ್ಲುವುದು ಕಷ್ಟ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಾಗಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಪಕ್ಷದ ಹಿರಿಯ ನಾಯಕರು. ವಿದ್ಯಾವಂತ ಮತ್ತು ಹಿರಿಯ ಮುತ್ಸದ್ಧಿ. ಅವರು ಸರಕಾರವನ್ನು ಗೊಂದಲಕ್ಕೆ ತಳ್ಳುವಂತಹ ಯಾವುದೇ ಕೆಲಸ ಮಾಡುವುದಿಲ್ಲ. ರಾಜಕಾರಣಿ ಎಂದ ಮೇಲೆ ಆಸೆಗಳು ಸಹಜ. ಕಾರ್ಯಕರ್ತರನ್ನು ಹುಮ್ಮಸ್ಸಿನಲ್ಲಿ ಇಡಬೇಕಾದರೆ ಆ ರೀತಿಯ ಹೇಳಿಕೆಗಳನ್ನು ನೀಡಬೇಕಾಗುತ್ತದೆ ಎಂದು ಸಮರ್ಥನೆ ಮಾಡಿದರು.

ನಾನು ಸಿಎಂ ಹುದ್ದೆ ಸ್ಪರ್ಧೆಯಲ್ಲಿ ಇಲ್ಲ. ಮೈತ್ರಿ ಸರಕಾರ ಐದು ವರ್ಷ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಆವರೆಗೂ ಯಾವುದೇ ತೊಂದರೆಗಳಾಗುವುದಿಲ್ಲ. ಮುಂದೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಂದಿನ ಸಿಎಂ ಯಾರು ಎಂದು ಹೈಕಮಾಂಡ್ ನಿರ್ಧರಿಸುತ್ತದೆ.

‘ಅಕ್ಕ’ ಸಮ್ಮೇಳನಕ್ಕೆ ಕೆಲ ಸಚಿವರು, ಅಧಿಕಾರಿಗಳು ಹೋಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸಲ್ಲ. ಪ್ರತಿ ವರ್ಷ ಸಿಎಂ, ಸಚಿವರು ಹೋಗುವುದು ವಾಡಿಕೆ. ಈ ಬಾರಿಯೂ ಸಿಎಂ ಹೋಗಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ನನಗೂ ಆಹ್ವಾನವಿತ್ತು. ಆದರೆ, ಕಾರಣಗಳಿಂದ ನಾನು ಅಮೆರಿಕಕ್ಕೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ಸೇರಿಸಿ 100 ಕೋಟಿ ರೂ.ಗಳನ್ನು ಕೊಡಗಿನ ನಿರಾಶ್ರಿತರಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣ ಸದ್ಬಳಕೆಯಾಗುವಂತೆ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

‘ಸಂಪುಟ ಸಭೆಗೂ ಬರದೆ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕೊಡಗು ಉಸ್ತುವಾರಿ ಸಾ.ರಾ.ಮಹೇಶ್ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೊಡ್ಡವರು. ಅವರು ಸಾ.ರಾ.ಮಹೇಶ್ ಅವರನ್ನು ನಿಂದಿಸಿ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ, ನಮ್ಮ ಜನರಿಗೆ ಅನುಕೂಲ ಆಗಬೇಕೆಂಬುದು ನಮ್ಮ ಉದ್ದೇಶ’
-ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News