ಪೋಕ್ಸೋ ಪ್ರಕರಣ ಇತ್ಯರ್ಥಕ್ಕೆ ವಕೀಲರಿಗೆ ತರಬೇತಿ: ಡಿಸಿಎಂ ಡಾ.ಜಿ.ಪರಮೇಶ್ವರ್
ಬೆಂಗಳೂರು, ಆ.27: ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಚಾಕಚಕ್ಯತೆಯಿಂದ ಇತ್ಯರ್ಥಗೊಳಿಸಲು ಬೇಕಾದ ತಾಂತ್ರಿಕ ಸಲಹೆಗಳನ್ನು ನೀಡಲು ಎಲ್ಲ ಜಿಲ್ಲಾ ವಕೀಲರಿಗೆ ಹಿರಿಯ ವಕೀಲರಿಂದ ತರಬೇತಿ ಕೊಡಿಸುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲೆಗಳಲ್ಲಿ ಪೋಕ್ಸೋ ಪ್ರಕರಣ ನಿರ್ವಹಿಸುವ ವಿಶೇಷ ಸರಕಾರಿ ಅಭಿಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಪೋಕ್ಸೋ ಕಾಯಿದೆ ಬಗೆಹರಿಸುವಲ್ಲಿ ಜಿಲ್ಲಾ ವಕೀಲರು ಎಡವುತ್ತಿದ್ದಾರೆ. ಹೀಗಾಗಿ ಹಿರಿಯ ವಕೀಲರು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ತರಬೇತಿ ಕೊಡಿಸುವುದು ಸೂಕ್ತ ಎಂದರು.
ಮಕ್ಕಳ ಮೇಲಾಗುವ ದೌರ್ಜನ್ಯ ನಿಯಂತ್ರಣಕ್ಕೆಂದೇ ಪೋಕ್ಸೋ ಕಾಯ್ದೆ ತರಲಾಗಿದೆ. ಆದರೆ ಇದರಡಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿಯುತ್ತಿರುವುದು ಆರೋಪಿಗಳಲ್ಲಿ ಭಯ ಕಡಿಮೆಯಾಗಿದೆ. ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರಕರಣಗಳು ಇತ್ಯರ್ಥವಾಗಲು ಯಾವ ಕಾರಣಕ್ಕೆ ತಡವಾಗುತ್ತಿದೆ? ಪೊಲೀಸ್ ಇಲಾಖೆಯಿಂದ ಸಾಕ್ಷಾಧಾರ ಕಲೆಹಾಕುವಲ್ಲಿ ತಡವಾಗುತ್ತಿದೆಯೇ? ಈ ಬಗ್ಗೆ ನನ್ನ ಗಮನಕ್ಕೆ ತನ್ನಿ. ಸಣ್ಣ ಕಾರಣಕ್ಕೆ ಪ್ರಕರಣವನ್ನು ಬಾಕಿ ಇಡಬಾರದು. ಪೊಲೀಸ್ ಅಧಿಕಾರಿಗಳ ಸಹಕಾರವಿಲ್ಲದಿದ್ದರೆ ಡಿಜಿ ಅವರ ಗಮನಕ್ಕೆ ತನ್ನಿ ಎಂದು ಪರಮೇಶ್ವರ್ ಸಲಹೆ ನೀಡಿದರು.
ಈಗ ಬಾಕಿ ಇರುವ ಪ್ರಕರಣಗಳ ಕಾರಣಗಳನ್ನು 15 ದಿನದೊಳಗೆ ಮರುಪರಿಶೀಲನೆ ಮಾಡಿ, ಬಾಕಿ ಪ್ರಕರಣ ಕೈಗೆತ್ತಿಕೊಳ್ಳಿ ಎಂದು ಪರಮೇಶ್ವರ್ ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಗೃಹ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.