ದೇಶದ ಹಲವೆಡೆ ಹೋರಾಟಗಾರರ ಮನೆ ಮೇಲೆ ಪೊಲೀಸ್ ದಾಳಿ

Update: 2018-08-28 16:41 GMT

ಹೊಸದಿಲ್ಲಿ, ಆ. 28: ಮಹಾರಾಷ್ಟ್ರದ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಮುಂಬೈ, ರಾಂಚಿ, ಹೈದರಾಬಾದ್, ದಿಲ್ಲಿ, ಫರೀದಾಬಾದ್ ಹಾಗೂ ಗೋವಾದಲ್ಲಿರುವ ಹಲವು ಮಾನವ ಹಕ್ಕುಗಳ ಕಾರ್ಯಕರ್ತರ ನಿವಾಸಗಳ ಮೇಲೆ ವಿವಿಧ ಪೊಲೀಸ್ ತಂಡಗಳು ಮಂಗಳವಾರ ಬೆಳಗ್ಗೆ ಏಕ ಕಾಲದಲ್ಲಿ ದಾಳಿ ನಡೆಸಿವೆ ಹಾಗೂ ಆನಂದ ತೇಲ್ತುಂಬ್ಡೆ, ವರವರ ರಾವ್, ಸುಧಾ ಭಾರದ್ವಾಜ್ ಸಹಿತ ಕೆಲವರನ್ನು ವಶಕ್ಕೆ ಪಡೆದುಕೊಂಡಿದೆ.

ಮುಂಬೈಯಲ್ಲಿ ವೆರ್ನನ್ ಗೋನ್ಸಾಲ್ವೆಸ್, ಸುಸಾನ್ ಅಬ್ರಹಾಮ್ ಹಾಗೂ ಅರುಣ್ ಪಿರೇರಾ, ಹೊಸದಿಲ್ಲಿಯಲ್ಲಿ ಗೌತಮ್ ನವ್ಲಾಖಾ, ಫರೀದಾಬಾದ್‌ನಲ್ಲಿ ಸುಧಾ ಭಾರದ್ವಾಜ್, ರಾಂಚಿಯಲ್ಲಿ ಸ್ಟಾನ್ ಸ್ವಾಮಿ, ಹೈದರಾಬಾದ್‌ನಲ್ಲಿ ವರವರ ರಾವ್, ಅವರ ಕುಟುಂಬ ಸದಸ್ಯರು ಹಾಗೂ ಕ್ರಾಂತಿ ಟೆಕುಲಾ, ನಸೀಮಾ, ಗೋವಾದಲ್ಲಿ ಆನಂದ ತೇಲ್ತುಂಬ್ಡೆ ಮೊದಲಾದವರ ನಿವಾಸದ ಮೇಲೆ ಪೊಲೀಸರ ವಿವಿಧ ತಂಡ ದಾಳಿ ಮಾಡಿ ಶೋಧ ನಡೆಸಿದೆ. ಜನವರಿ 1ರಂದು ಪುಣೆಯ ಸಮೀಪ ಭೀಮಾ ಕೋರೆಗಾಂವ್‌ನಲ್ಲಿ ಜಾತಿ ಸಂಬಂಧಿತ ಹಿಂಸಾಚಾರ ಸಂಭವಿಸುವ ಮುನ್ನ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಗೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ನಿವಾಸದ ಮೇಲೆ ಪುಣೆಯ ವಿಶ್ರಮ್‌ಬಾಗ್ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತ ಹಾಗೂ ವಕೀಲ ಅರುಣ್ ಪಿರೇರಾ ತಿಳಿಸಿದ್ದಾರೆ. ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡ ಆರೋಪದಲ್ಲಿ ಜೂನ್‌ನಲ್ಲಿ ಬಂಧಿತರಾದ ಐವರು ಸಾಮಾಜಿಕ ಕಾರ್ಯಕರ್ತರಲ್ಲಿ ಓರ್ವರಾದ ನಾಗಪುರ ಮೂಲದ ವಕೀಲ ಸುರೇಂದ್ರ ಗಾಡ್ಲಿಂಗ್ ವಿರುದ್ಧದ ಪ್ರಕರಣವನ್ನು ತಾನು ಕೈಗೆತ್ತಿಕೊಂಡಿದ್ದೆ ಎಂದು ಪಿರೇರಾ ತಿಳಿದ್ದಾರೆ. ನಕ್ಸಲೀಯ ಎಂಬ ಆರೋಪಕ್ಕೆ ಒಳಗಾಗಿದ್ದ ಪಿರೇರಾ ಅವರು 2012ರಲ್ಲಿ ಬಿಡುಗಡೆಗೊಂಡಿದ್ದರು. ವೆರ್ನನ್ ಗೊನ್ಸಾಲ್ವೆಸ್ ನಿವಾಸದ ಮೇಲೆ ಬೆಳಗ್ಗೆ 6 ಗಂಟೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅವರ ಸಂಬಂಧಿಕರು ದೃಢಪಡಿಸಿದ್ದಾರೆ.

ಅರುಣ್ ಫಿರೇರಾ, ಸುಸಾನ್ ಅಬ್ರಹಾಂ ಹಾಗೂ ವೆರ್ನನ್ ಗೋನ್ಸಾಲ್ವೆಸ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗೌತಮ್ ನವ್ಲಾಖ್ ಅವರನ್ನು ಹೊಸದಿಲ್ಲಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಛತ್ತೀಸ್‌ಗಡದಲ್ಲಿ ಮಾನವ ಹಕ್ಕುಗಳ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರದ್ವಾಜ್ ಅವರನ್ನು ಫರೀದಾಬ್‌ನಲ್ಲಿ ಸೂರಜ್‌ಕುಂಡ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸ್ಟಾನ್ ಸ್ವಾಮಿ ಬಗ್ಗೆ ನಾವು ಕೆಲವು ಗೌಪ್ಯ ಮಾಹಿತಿಗಳನ್ನು ಸ್ವೀಕರಿಸಿದ್ದೆವು. ಈ ಹಿನ್ನೆಲೆಯಲ್ಲಿ ಮಾಹಿತಿ ಧ್ವಂಸಗೊಳಿಸುವುದನ್ನು ತಡೆಯಲು ಲ್ಯಾಪ್‌ಟಾಪ್, ಹಾರ್ಡ್‌ಡ್ರೈವ್, ಮೊಬೈಲ್ ಹಾಗೂ ಇತರ ತಾಂತ್ರಿಕ ಉಪಕರಣಗಳನ್ನು ವಶಪಡಿಸಿಕೊಳ್ಳಲು ನಾವು ಬಯಸಿದ್ದೆವು ಎಂದು ಸ್ವಾಮಿ ನಿವಾಸದ ಸರ್ಚ್ ವಾರೆಂಟ್ ಜಾರಿ ಮಾಡಿದ್ದ ಪುಣೆ ನಗರದ ಸ್ವಾರ್ಗೇಟ್ ವಿಭಾಗದ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿ ಪವಾರ್ ಹೇಳಿದ್ದಾರೆ.

 ಮಹಾರಾಷ್ಟ್ರ ಹಾಗೂ ಸ್ಥಳೀಯ ಪೊಲೀಸರು ಬೆಳಗ್ಗೆ 6 ಗಂಟೆಗೆ ರಾಂಚಿಯಲ್ಲಿರುವ ಸ್ವಾಮಿ ಅವರು ಕೊಠಡಿ ಮೇಲೆ ದಾಳಿ ನಡೆಸಿದ್ದಾರೆ. ಸ್ವಾಮಿ ಅವರ ಮೊಬೈಲ್, ಲ್ಯಾಪ್‌ಟಾಪ್, ಅಡಿಯೋ ಕ್ಯಾಸೆಟ್‌ಗಳು, ಸಿಡಿಗಳು ಹಾಗೂ ಪಥಾಲ್‌ಗಾಡಿ (ಚಳವಳಿ)ಯ ಕೆಲವು ಪತ್ರಿಕಾ ಹೇಳಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ದಾಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಜಾರ್ಖಂಡ್‌ನ ಸಾಮಾಜಿಕ ಹೋರಾಟಗಾರ ಸಿರಾಜ್ ದತ್ತಾ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ವರವರ ರಾವ್ ಅವರನ್ನು ಪುಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿಕ್ಕಡ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಆರ್‌ಟಿಸಿ ಎಕ್ಸ್ ರಸ್ತೆ ಸಮೀಪದ ಜವಾಹರ್ ನಗರದಲ್ಲಿರುವ ವರವರ ರಾವ್ ನಿವಾಸಕ್ಕೆ ಮಹಾರಾಷ್ಟ್ರದ 20 ಮಂದಿ ಪೊಲೀಸರು ಸಿವಿಲ್ ಡ್ರೆಸ್‌ನಲ್ಲಿ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಅನಂತರ ಅವರನ್ನು ವಶಕ್ಕೆ ತೆಗೆದು ಕೊಂಡರು. ವರ್ಗಾವಣೆಗಾಗಿ ರಾವ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನಷ್ಟು ವಿಚಾರಣೆಗಾಗಿ ಅವರನ್ನು ಪುಣೆಗೆ ಕೊಂಡೊಯ್ಯಲಾಗಿದೆ. ಇದೇ ಸಂದರ್ಭ ವರವರ ರಾವ್ ಅವರ ಪುತ್ರಿಯರಾದ ಅನಲಾ ಹಾಗೂ ಪವನಾ ಅವರ ನಿವಾಸದಲ್ಲೂ ಪೊಲೀಸರು ಶೋಧ ನಡೆಸಿದ್ದಾರೆ. ಅನಲ ಅವರು ಪತ್ರಕರ್ತ ಕುರ್ಮನಾಥ್ ಅವರನ್ನು ವಿವಾಹವಾಗಿದ್ದರೆ, ಪವನಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಹಾಗೂ ವಿದೇಶಿ ಭಾಷೆ ವಿಭಾಗದ ಪ್ರಾದ್ಯಾಪಕ ಹಾಗೂ ದಲಿತ ಕಾರ್ಯಕರ್ತ ಕೆ. ಸತ್ಯನಾರಾಯಣ ಅವರನ್ನು ವಿವಾಹವಾಗಿದ್ದಾರೆ. ಸತ್ಯನಾರಾಯಣ ಅವರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಇದಲ್ಲದೆ ‘ವಿರಸಂ’ ಪತ್ರಿಕೆ ಸಿಬ್ಬಂದಿ ನಸೀಮಾ ಹಾಗೂ ಛಾಯಾಚಿತ್ರಗ್ರಾಹಕ ಕ್ರಾಂತಿ ತೆಕುಲಾ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಗೋವಾದಲ್ಲಿ ದಲಿತ ಲೇಖಕ ಆನಂದ ತೇಲ್ತಂಬ್ಡೆ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಈ ದಾಳಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ.

-ಶೆಹ್ಲಾ ರಶೀದ್, ಜೆಎನ್‌ಯು ವಿದ್ಯಾರ್ಥಿನಿ.

ಇದು ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಸರಕಾರದ ವಿರುದ್ಧ ಧ್ವನಿ ಎತ್ತುವವರು ಎನ್‌ಜಿಒಗಳು. ಈ ದಾಳಿಯ ಮೂಲಕ ಈ ಸಮೂಹವನ್ನು ವೌನವಾಗಿರಿಸಲು ಸರಕಾರ ಪ್ರಯತ್ನಿಸುತ್ತಿದೆ.

-ಪ್ರಕಾಶ್ ಅಂಬೇಡ್ಕರ್, ದಲಿತ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News