ಕೇರಳದ ನೆರೆ ಪರಿಹಾರ ಶಿಬಿರಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ

Update: 2018-08-28 14:35 GMT

 ತಿರುವನಂತಪುರ,ಆ.28: ಕೇರಳದ ನೆರೆಪೀಡಿತ ಪ್ರದೇಶಗಳಿಗೆ ತನ್ನ ಎರಡು ದಿನಗಳ ಭೇಟಿಯನ್ನು ಮಂಗಳವಾರ ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪರಿಹಾರ ಶಿಬಿರಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

 ಬೆಳಿಗ್ಗೆ ಬ್ರಿಟನ್‌ನಿಂದ ಇಲ್ಲಿಗೆ ಆಗಮಿಸಿದ ಗಾಂಧಿ ನೇರವಾಗಿ ಚೆಂಗನ್ನೂರು ಮತ್ತು ಅಲಪ್ಪುಳಗಳಲ್ಲಿಯ ಪರಿಹಾರ ಶಿಬಿರಗಳಿಗೆ ತೆರಳಿದರು. ಎರ್ನಾಕುಳಂ ಜಿಲ್ಲೆಯ ಕೆಲವು ಶಿಬಿರಗಳಿಗೂ ಅವರು ಭೇಟಿ ನೀಡಿದರು.

ಗಾಂಧಿ ಬುಧವಾರ ವಯನಾಡ್ ಮತ್ತು ಕೊಝಿಕ್ಕೋಡ್ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಚೆಂಗನ್ನೂರಿನ ಕ್ರಿಶ್ಚಿಯನ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಗಾಂಧಿ ಸಂತ್ರಸ್ತರೊಡನೆ ಮಾತುಕತೆ ನಡೆಸಿದರು. ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಮೀನುಗಾರರು ಮತ್ತು ಪಕ್ಷದ ಕಾರ್ಯಕರ್ತರನ್ನೂ ಅವರು ಭೇಟಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.

ವಿಪತ್ತು ನಿರ್ವಹಣೆಯ ರಾಜ್ಯ ನಿಯಂತ್ರಣ ಕೊಠಡಿಯು ಮಂಗಳವಾರ ಬೆಳಿಗ್ಗೆ ನೀಡಿರುವ ಮಾಹಿತಿಯಂತೆ ಮೇ 29ರಿಂದ ರಾಜ್ಯದಲ್ಲಿ ಮಳೆ ಮತ್ತು ನೆರೆ ಹಾವಳಿಯಿಂದಾಗಿ 474 ಜನರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News