ಒತ್ತಡಕ್ಕೆ ಬಾಗಿದ ಟ್ರಂಪ್: ಮತ್ತೆ ಅರ್ಧ ಮಟ್ಟದಲ್ಲಿ ಹಾರಿದ ಅಮೆರಿಕ ಧ್ವಜ

Update: 2018-08-28 17:00 GMT

ವಾಶಿಂಗ್ಟನ್, ಆ. 28: ಶ್ವೇತಭವನದ ತುದಿಯಲ್ಲಿ ಹಾರಾಡುತ್ತಿದ್ದ ಅಮೆರಿಕದ ರಾಷ್ಟ್ರೀಯ ಧ್ವಜ ಸೋಮವಾರದ ಹೆಚ್ಚಿನ ಅವಧಿಯಲ್ಲಿ ರಾಷ್ಟ್ರೀಯ ಗಮನದ ಕೇಂದ್ರವಾಗಿತ್ತು. ಯಾಕೆಂದರೆ ರಿಪಬ್ಲಿಕನ್ ಪಕ್ಷದ ಸೆನೆಟರ್ ಜಾನ್ ಮೆಕೇನ್‌ರ ನಿಧನಕ್ಕೆ ಅಮೆರಿಕ ಸರಕಾರ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಬದಲಾವಣೆಯಾಗಿತ್ತು.

ರಾಷ್ಟ್ರೀಯ ‘ಹೀರೋ’ ಆಗಿದ್ದ ಮೆಕೇನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕಟು ಟೀಕಾಕಾರರಾಗಿದ್ದುದು ಈ ಬೆಳವಣಿಗೆಗೆ ಕಾರಣವಾಗಿತ್ತು.

ಮೆಕೇನ್ ನಿಧನರಾಗಿದ್ದಾರೆ ಎಂಬುದಾಗಿ ಅವರ ಕುಟುಂಬ ಶನಿವಾರ ಸಂಜೆ ಪ್ರಕಟಿಸಿದಂದಿನಿಂದ ಶ್ವೇತಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಲಾಗಿತ್ತು. ಆದರೆ, ಸೋಮವಾರ ಸಂಜೆ ಅದರ ಸಾಮಾನ್ಯ ಸ್ಥಾನವಾದದ ಪೂರ್ಣ ಎತ್ತರಕ್ಕೆ ಹಾರಿಸಲಾಗಿತ್ತು. ಆದರೆ, ಸಾರ್ವಜನಿಕರ ನಿರಂತರ ಆಕ್ರೋಶ ಮತ್ತು ಅಪಹಾಸ್ಯದ ಹಿನ್ನೆಲೆಯಲ್ಲಿ, ಗಂಟೆಗಳ ಬಳಿಕ ರಾಷ್ಟ್ರಧ್ವಜವನ್ನು ಮತ್ತೆ ಅರ್ಧ ಮಟ್ಟಕ್ಕೆ ಇಳಿಸಲಾಯಿತು.

ಈ ಬೆಳವಣಿಗೆಗಳಿಗೆ ಯಾವುದೇ ಕಾರಣವನ್ನು ನೀಡಲಾಗಿಲ್ಲ.

‘‘ನೀತಿ ಮತ್ತು ರಾಜಕಾರಣದಲ್ಲಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನಮ್ಮ ದೇಶಕ್ಕೆ ಜಾನ್ ಮೆಕೇನ್ ಸಲ್ಲಿಸಿದ ಸೇವೆಯನ್ನು ನಾನು ಗೌರವಿಸುತ್ತೇನೆ. ಅವರ ಗೌರವಾರ್ಥವಾಗಿ, ಅವರ ಶವ ಸಂಸ್ಕಾರದವರೆಗೂ ಅಮೆರಿಕದಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುವಂತೆ ಸೂಚಿಸುವ ಆದೇಶಕ್ಕೆ ಸಹಿ ಹಾಕಿದ್ದೇನೆ’’ ಎಂದು ಟ್ರಂಪ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅವರ ಅಂತ್ಯಸಂಸ್ಕಾರ ರವಿವಾರ ನಡೆಯಲಿದೆ. ಅಂದಿನವರೆಗೆ ಶ್ವೇತಭವನ ಸೇರಿದಂತೆ ಅಮೆರಿಕದ ಎಲ್ಲ ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧ ಮಟ್ಟದಲ್ಲಿ ಹಾರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News