ನವೆಂಬರ್‌ನಲ್ಲಿ ದ್ರಾವಿಡ ಭಾಷಾ ಸಮಾವೇಶ
ಬೆಂಗಳೂರು, ಆ. 29: ದ್ರಾವಿಡ ಭಾಷಾ ಬಳಗಕ್ಕೆ ಸೇರಿದ ಎಲ್ಲ ಭಾಷೆಗಳನ್ನೂ ಒಗ್ಗೂಡಿಸುವ ಮತ್ತು ಆಯಾ ಭಾಷೆಗಳ ಅಸ್ಮಿತೆಯನ್ನು ಗೌರವಿಸುವ ಪರಸ್ಪರ ಭಾಷಾ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನವೆಂಬರ್ 2018ರಲ್ಲಿ ದ್ರಾವಿಡ ಭಾಷಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಾವಿರಾರು ವರ್ಷಗಳ ಲಿಪಿ ರೂಪದ ಇತಿಹಾಸಗಳಿರುವ ಈ ದ್ರಾವಿಡ ಭಾಷೆಗಳು ಅವುಗಳ ಮೂಲ ಲಿಪಿ ವಿಕಾಸವಾದಂತೆ ಭಿನ್ನತೆ ಹೊಂದಿದ್ದರೂ ಅವುಗಳ ಸಮಾನ ಸ್ವರೂಪಗಳನ್ನು ಉಳಿಸಿಕೊಂಡಿದ್ದು, ಬಹುತ್ವ ಭಾರತದ ಸಂದರ್ಭದಲ್ಲಿ ಈ ಭಾಷೆಗಳ ಐಕ್ಯತೆ ಮತ್ತು ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ದ್ರಾವಿಡ ಸಮಾವೇಶವನ್ನು ಭಾಷಾ ಭಾವೈಕ್ಯತೆಯ ಸಮಾವೇಶವಾಗಿ ರೂಪಿಸಲಾಗುತ್ತಿದೆ.
ಆದರೆ, ಸದರಿ ದ್ರಾವಿಡ ಭಾಷಾ ಸಮಾವೇಶದಿಂದ ತುಳು ಮತ್ತು ಕೊಡವ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಹೊರಗಿಡಲಾಗುತ್ತಿದೆ ಎನ್ನುವ ಆರೋಪದ ಕೂಗು ಎದ್ದಿದೆ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ. ಆ.18ರಂದು ದ್ರಾವಿಡ ಭಾಷಾ ಸಮಾವೇಶದ ಪೂರ್ವಭಾವಿ ಸಭೆಗೆ ತುಳು ಮತ್ತು ಕೊಡವ ಅಕಾಡೆಮಿಯ ಅಧ್ಯಕ್ಷರನ್ನೂ ಆಹ್ವಾನಿಸಲಾಗಿತ್ತು. ಕಾರಣಾಂತರಗಳಿಂದ ಅವರು ಸಭೆಗೆ ಆಗಮಿಸಿರಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಕಾರಣಕ್ಕೂ ರಾಜ್ಯದ ಭಾಷೆಗಳನ್ನು ಕಡೆಗಣಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಒಂದು ಭಾಷೆ ಮತ್ತೊಂದು ಭಾಷೆಯ ಜೊತೆಗೆ ಸೌಹಾರ್ದಯುತವಾಗಿರುವಂತೆ ಮತ್ತು ಎಲ್ಲ ಭಾಷೆಗಳಿಗೂ ಸಮಾನ ಗೌರವ ಸಿಗುವಂತೆ ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಾನವಿರಬೇಕೆನ್ನುವುದು ಪ್ರಾಧಿಕಾರದ ಸದುದ್ದೇಶ. ಭಾಷೆಯ ಬಲವಂತದ ಹೇರಿಕೆಯನ್ನಷ್ಟೇ ಪ್ರಾಧಿಕಾರ ವಿರೋಧಿಸುತ್ತದೆ. ರಾಜ್ಯದ ಭಾಷೆಗಳಾದ ಕನ್ನಡ, ಕೊಡವ, ತುಳು, ಅರೆಭಾಷೆಗಳೂ ತನ್ನದೇ ಅಸ್ತಿತ್ವವನ್ನು ಹೊಂದಿದ್ದು ಅವುಗಳನ್ನೂ ಒಳಗೊಂಡು ಭಾಷಾ ಸಮಾವೇಶವನ್ನು ರೂಪಿಸುವುದು ಪ್ರಾಧಿಕಾರದ ಹೊಣೆಗಾರಿಕೆಯೂ ಆಗಿದೆ.
ಇಂತಹ ಹೊಣೆಗಾರಿಕೆಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವತ್ತೂ ಹಿಂದೆ ಸರಿದಿಲ್ಲ. ಪ್ರಸ್ತುತ ಸ್ಥಳೀಯ ಭಾಷೆಗಳ ಅಸ್ಮಿತೆಯನ್ನು ಪಾರಂಪರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಕಾಪಾಡುವುದಕ್ಕೆ ಪೂರಕವಾಗುವ ಕೆಲಸಗಳಾಗಬೇಕಿದ್ದು ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುನ್ನುಡಿ ಬರೆಯುವ ಕೆಲಸ ಮಾಡುತ್ತಿದೆ. ಭಾಷೆಯ ಮೂಲಕ ಪರಸ್ಪರರ ಸಂಸ್ಕೃತಿಯನ್ನು ಅರಿಯುವ ಮತ್ತು ಗೌರವಿಸುವ ಹೊಣೆಗಾರಿಕೆಯನ್ನು ಅರಿತು ಪ್ರಾಧಿಕಾರ ಸಮಾವೇಶ ಆಯೋಜಿಸಲು ಮುಂದಾಗಿದೆ. ಆದ್ದರಿಂದ ಯಾವುದೇ ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಧೋರಣೆಯ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದಂತೆ ದ್ರಾವಿಡ ಭಾಷಾ ಸಮಾವೇಶಕ್ಕೆ ಪ್ರಾಧಿಕಾರವು ಎಲ್ಲರ ಸಹಕಾರ ಕೋರುತ್ತದೆ ಎಂದು ಪ್ರಕಟಣೆ ತಿಳಿಸಿದೆ.