‘ಖೇಲ್‌ರತ್ನ’ ಪ್ರಶಸ್ತಿ ಸ್ಪರ್ಧೆಯಲ್ಲಿ ಪೂನಿಯಾ, ಫೋಗಟ್

Update: 2018-08-29 18:29 GMT

ಹೊಸದಿಲ್ಲಿ, ಆ.29: ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಈಗ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ಕುಸ್ತಿತಾರೆಯರಾದ ಬಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಬಜರಂಗ್ ಈಗಾಗಲೇ ಕುಸ್ತಿ ಫೆಡರೇಶನ್ ಮೂಲಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಕ್ರೀಡಾ ಸಚಿವಾಲಯ ವಿನೇಶ್ ಹೆಸರನ್ನು ಪ್ರಶಸ್ತಿಗೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೆಪ್ಟಂಬರ್‌ನ ಮೊದಲ ವಾರ ಭಾರತ ಅಥ್ಲೀಟ್‌ಗಳ ಏಶ್ಯನ್ ಗೇಮ್ಸ್ ಸಾಧನೆಯನ್ನು ಅವಲೋಕನ ನಡೆಸಲಿದ್ದು, ಸಚಿವಾಲಯ ಆಯ್ಕೆ ಸಮಿತಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ.

ಪ್ರತಿವರ್ಷ ಆ.29 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿತ್ತು. ಏಶ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಈ ವರ್ಷ ಸೆ.25 ರಂದು ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ಬಜರಂಗ್ ಹಾಗೂ ಫೋಗಟ್ ಖೇಲ್‌ರತ್ನ ಪ್ರಶಸ್ತಿಯ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News