ಜೆಇಇ, ನೀಟ್‌ಗೆ ಇನ್ನು ಉಚಿತ ಸರ್ಕಾರಿ ಕೋಚಿಂಗ್

Update: 2018-08-30 03:50 GMT

ಹೊಸದಿಲ್ಲಿ, ಆ.30: ಜೆಇಇ ಮತ್ತು ನೀಟ್ ಸಿದ್ಧತೆಗೆ ಉಚಿತ ಕೋಚಿಂಗ್ ದೊರೆತರೆ? ಈ ಕನಸು ಮುಂದಿನ ವರ್ಷದಿಂದ ನನಸಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರ ರಚಿಸಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತನ್ನ ಎಲ್ಲ 2,697 ಪರೀಕ್ಷಾ ಅಭ್ಯಾಸ ಕೇಂದ್ರಗಳನ್ನು ಕೋಚಿಂಗ್ ಸೆಂಟರ್‌ಗಳಾಗಿ 2019ರಿಂದ ಪರಿವರ್ತಿಸಲಿದೆ. ಈ ವರ್ಷದ ಸೆಪ್ಟಂಬರ್ 8ರಿಂದ ಪರೀಕ್ಷಾ ಅಭ್ಯಾಸ ಕೇಂದ್ರಗಳು ಕಾರ್ಯ ನಿರ್ವಹಿಸುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ದುಬಾರಿ ಶುಲ್ಕದ ಮೂಲಕ, ನೀಟ್ ಹಾಗೂ ಜೆಇಇ ಪರೀಕ್ಷಾ ಆಕಾಂಕ್ಷಿಗಳನ್ನು ಸುಲಿಗೆ ಮಾಡುತ್ತಿದ್ದ ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ಇದು ಆಘಾತಕಾರಿ ಸುದ್ದಿ ಎಂದು ಸಚಿವಾಲಯ ಹೇಳಿದೆ. "ಈ ಅಭ್ಯಾಸ ಕೇಂದ್ರಗಳನ್ನು ಕೇವಲ ಪರೀಕ್ಷಾ ಅಭ್ಯಾಸಕ್ಕಷ್ಟೇ ಸೀಮಿತಗೊಳಿಸದೇ ಇವುಗಳನ್ನು ಬೋಧನಾ ಕೇಂದ್ರಗಳಾಗಿ ಪರಿವರ್ತಿಸುವುದು ಸರ್ಕಾರದ ಯೋಜನೆ. ಇದು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆ ಮೂಲಕ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದ ಬಡ- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ" ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಗೂ ಲಾಭವಾಗಲಿದೆ. 2019ರ ಮೇ ತಿಂಗಳಿನಿಂದ ಬೋಧನೆ ಆರಂಭವಾಗಲಿದೆ. ಮೊಟ್ಟಮೊದಲ ಬಾರಿಗೆ 2019ರಲ್ಲಿ ಜೆಇಇ-ಮೈನ್ ಆಕಾಂಕ್ಷಿಗಳಿಗಾಗಿ ಅಣಕು ಪರೀಕ್ಷೆಯನ್ನು ನಡೆಸಲು ಎನ್‌ಟಿಎ ನಿರ್ಧರಿಸಿದೆ.

ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಪರೀಕ್ಷೆಗೆ ಎನ್‌ಟಿಎ ಬಳಿ ನೋಂದಾಯಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳು ನೀಟ್-ಯುಜಿ ಮತ್ತು ಯುಜಿಸಿ- ನೆಟ್ ಅಣಕು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಎನ್‌ಟಿಎ ಮಾರ್ಗದರ್ಶಕರ ಬಳಿ ಅವರು ತಮ್ಮ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ, ಮತ್ತೆ ಕಲಿತು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈ ಕೇಂದ್ರಗಳು ನೆರವಾಗಲಿವೆ ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News